ಕಾಂಗ್ರೆಸ್‌ ನಿಂದ ಆಜಾದ್:‌ ಹೊಸಪಕ್ಷದ ಮೂಲಕ ಕಾಶ್ಮೀರ ರಾಜಕೀಯಕ್ಕೆ ಕಾಲಿಡಲಿದ್ದಾರಾ ಗುಲಾಂ ನಬಿ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹತ್ತಾರು ವರ್ಷಗಳಷ್ಟು ಹಳೆಯ ಕಾಂಗ್ರೆಸ್‌ ಬಂಧವನ್ನು ಮುರಿದುಕೊಂಡ ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್‌ ತಮ್ಮ ತವರು ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಪಕ್ಷದ ಮೊದಲ ಘಟಕವನ್ನು ಸ್ಥಾಪಿಸುವ ಮೂಲಕ ತಮ್ಮ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ.

ಇಂದು ಮಧ್ಯಾಹ್ನ ಜಮ್ಮುವಿಗೆ ಆಗಮಿಸಲಿರುವ ಅವರು ಅಲ್ಲಿನ ಸೈನಿಕ್‌ ಫಾರ್ಮ್ಸ್‌ ನಲ್ಲಿನ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಾರ್ವಜನಿಕ ಸಭೆಯಲ್ಲಿ ಸುಮಾರು 20,000 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಲ್ಲಿಂದ ಅವರು ರಾಷ್ಟ್ರೀಯ ಮಟ್ಟದ ಪಕ್ಷವನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ವರದಿ ಮಾಡಿವೆ.

ಕಾಂಗ್ರೆಸ್‌ನ ನಾಯಕ ರಾಹುಲ್‌ ಗಾಂಧಿಯವರ ಅಪ್ರಬುದ್ಧತೆಯಿಂದಾಗಿ ಕಾಂಗ್ರೆಸ್‌ ಪಕ್ಷ ನಾಶವಾಗಿದೆ ಎನ್ನುವ ಮೂಲಕ ಪಕ್ಷದ ನಾಯಕತ್ವದ ವಿರುದ್ಧ ಗುಲಾಂ ನಬಿ ವಾಗ್ದಾಳಿ ನಡೆಸಿ ಪಕ್ಷದಿಂದ ಹೊರಬಂದಿದ್ದರು. ಆದರೆ ಕಾಂಗ್ರೆಸ್‌ ಆಜಾದ್‌ ಅವರ ಡಿಎನ್‌ಎ ಮೋದಿಪರವಾಗಿ ಬದಲಾಗಿದೆ ಎನ್ನುವ ಮೂಲಕ ತೇಪೆ ಹಚ್ಚಲು ಪ್ರಯತ್ನಿಸಿತ್ತು. ಕಪಿಲ್ ಸಿಬಲ್ ಮತ್ತು ಅಶ್ವನಿ ಕುಮಾರ್ ಸೇರಿದಂತೆ ಉನ್ನತ ಮಟ್ಟದ ನಾಯಕರ ರಾಜೀನಾಮೆ ಎದುರಿಸುತ್ತಿರುವ ಕಾಂಗ್ರೆಸ್‌ ಹೊಸ ಅಧ್ಯಕ್ಷರ ಚುನಾವನೆ ಘೋಷಿಸಿ ಪಕ್ಷಕ್ಕಾಗುತ್ತಿರುವ ಡ್ಯಾಮೇಜ್‌ ಅನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗುವಂತೆ ಮಾಜಿ ಸಚಿವರು ಮತ್ತು ಶಾಸಕರು ಸೇರಿದಂತೆ ಪಕ್ಷದ ಪ್ರಮುಖ ಹನ್ನೆರಡು ನಾಯಕರು, ನೂರಾರು ಪಂಚಾಯತ್ ರಾಜ್ ಸಂಸ್ಥೆ (ಪಿಆರ್‌ಐ) ಸದಸ್ಯರು, ಪುರಸಭೆ ಕಾರ್ಪೊರೇಟರ್‌ಗಳು ಮತ್ತು ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ನಾಯಕರು ಆಜಾದ್‌ ಅವರ ಪಕ್ಷದ ಜಮ್ಮು ಕಾಶ್ಮೀರ ಘಟಕವನ್ನು ಸೇರಲು ಹೊರಟಿದ್ದಾರೆ ಎನ್ನಲಾಗಿದೆ. ಈ ನಾಯಕರಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಉಪ ಮುಖ್ಯಮಂತ್ರಿ ತಾರಾ ಚಂದ್, ಮಾಜಿ ಸಚಿವರಾದ ಅಬ್ದುಲ್ ಮಜೀದ್ ವಾನಿ, ಮನೋಹರ್ ಲಾಲ್ ಶರ್ಮಾ, ಘರು ರಾಮ್ ಮತ್ತು ಮಾಜಿ ಶಾಸಕ ಬಲ್ವಾನ್ ಸಿಂಗ್ ಮತ್ತು ಹಲವರು ಸೇರಿದ್ದಾರೆ.

ಇವರೆಲ್ಲ ಇಂದು ಗುಲಾಂ ನಬಿ ಆಜಾದ್‌ ಪಾಳಯವನ್ನು ಸೇರುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!