September 28, 2026
Monday, September 28, 2026
spot_img

ಜಾಗತಿಕ ರಾಜಕೀಯದಲ್ಲಿ ‘ಬಾಹುಬಲಿ’ ಕ್ರೇಜ್: ಅಮೆರಿಕದ ಬೆದರಿಕೆಗೆ ಪ್ರಭಾಸ್ ಶೈಲಿಯಲ್ಲಿ ಇರಾನ್ ಪ್ರತ್ಯುತ್ತರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕಾ ನಿಲುವುಗಳಿಗೆ ಸಖತ್ತಾಗಿಯೇ ಠಕ್ಕರ್ ನೀಡುತ್ತಿರುವ ಇರಾನ್, ಈಗ ತಮ್ಮ ಅಧ್ಯಕ್ಷರ ದಿಟ್ಟ ಹೇಳಿಕೆಗೆ ‘ಬಾಹುಬಲಿ’ ಚಿತ್ರದ ಸಾಹಸ ದೃಶ್ಯ ಎಡಿಟ್ ಮಾಡುವ ಮೂಲಕ ನೆಕ್ಟ್ ಲೆವೆಲ್ ಗೆ ಹೋಗಿದ್ದು, ಇದು ಜಾಗತಿಕವಾಗಿ ಎಲ್ಲರ ಹುಬ್ಬೇರುವಂತೆ ಮಾಡಿದೆ!

ಅಂತಾರಾಷ್ಟ್ರೀಯ ರಾಜಕೀಯ, ರಾಜತಾಂತ್ರಿಕ ಜಟಾಪಟಿಗಳು, ಗಂಭೀರ ಹೇಳಿಕೆಗಳು ಸಾಮಾನ್ಯವಾಗಿ ಪತ್ರಿಕಾಗೋಷ್ಠಿಗಳು, ಅಧಿಕೃತ ದಾಖಲೆಗಳಿಗಷ್ಟೇ ಸೀಮಿತವಾಗಿರುತ್ತವೆ. ಆದರೆ, ಅಮೆರಿಕದಂತಹ ಬಲಶಾಲಿ ದೇಶದ ಸವಾಲನ್ನು ಸ್ವೀಕರಿಸಲು ಇರಾನ್ ಭಾರತದ ಹೆಮ್ಮೆಯ ಸಿನಿಮಾ ‘ಬಾಹುಬಲಿ’ ಚಿತ್ರದ ಸಾಹಸ ದೃಶ್ಯವನ್ನು ಬಳಸಿಕೊಂಡಿರುವುದು ಜಾಗತಿಕವಾಗಿ ಸದ್ದು ಮಾಡಿದೆ.

ಏನಿದು ಘಟನೆ?

ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಮಹಾಸಭೆಯ 81ನೇ ಅಧಿವೇಶನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಇರಾನ್ ಅಧ್ಯಕ್ಷ ಡಾ. ಮಸೌದ್ ಪೆಜೆಶ್ಕಿಯನ್ ನೇರವಾಗಿ ಪ್ರತ್ಯುತ್ತರ ನೀಡಿದ್ದಾರೆ. ಅಮೆರಿಕದ ನಿರ್ಬಂಧಗಳು, ಬೆದರಿಕೆಗಳು ಅಥವಾ ಯಾವುದೇ ರೀತಿಯ ಒತ್ತಡಗಳಿಗೆ ಇರಾನ್ ಎಂದಿಗೂ ಹೆದರುವುದಿಲ್ಲ. ನಮ್ಮ ದೇಶ ಮತ್ತು ಜನರು ಯಾರ ಎದುರೂ ತಲೆಬಾಗುವುದಿಲ್ಲ, ಮಂಡಿಯೂರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಧ್ಯಕ್ಷರ ಈ ದಿಟ್ಟ ಹೇಳಿಕೆಗೆ ಹೈದರಾಬಾದ್‌ನಲ್ಲಿರುವ ಇರಾನ್ ರಾಯಭಾರ ಕಚೇರಿ ಎಸ್‌ಎಸ್‌ ರಾಜಮೌಳಿ ನಿರ್ದೇಶನದ, ಪ್ರಭಾಸ್ ಅಭಿನಯದ ‘ಬಾಹುಬಲಿ: ದಿ ಬಿಗಿನಿಂಗ್’ ಚಿತ್ರದ ಅತ್ಯಂತ ರೋಮಾಂಚನಕಾರಿ ಯುದ್ಧದ ದೃಶ್ಯವನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ‘X’ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಬೂಸ್ಟ್ ನೀಡಿದೆ.

‘ಬಾಹುಬಲಿ’ ಶೈಲಿಯಲ್ಲಿ ಮಾಸ್ ಪಂಚ್

ಆ ವೀಡಿಯೊದಲ್ಲಿ, ಅಸಂಖ್ಯಾತ ಸೈನ್ಯದ ವಿರುದ್ಧ ಯಾವುದೇ ಭಯವಿಲ್ಲದೆ, ಏಕಾಂಗಿಯಾಗಿ ಹೋರಾಡುವ ಅಮರೇಂದ್ರ ಬಾಹುಬಲಿಯ ಪರಾಕ್ರಮದ ದೃಶ್ಯವಿದೆ. ಎಷ್ಟು ದೊಡ್ಡ ಶತ್ರು ಎದುರಾದರೂ ಹಿಂದೆಟು ಹಾಕದ ಬಾಹುಬಲಿಯ ನಾಯಕತ್ವ ಮತ್ತು ಸಾಹಸದ ಗುಣವನ್ನು ಇರಾನ್ ತನ್ನ ದೇಶದ ಹೋರಾಟದ ಮನೋಭಾವಕ್ಕೆ ಹೋಲಿಸಿದೆ.

ವೀಡಿಯೊ ಜೊತೆಗೆ ವಿಶ್ವಸಂಸ್ಥೆಯಲ್ಲಿ ಇರಾನ್ ಅಧ್ಯಕ್ಷ ಡಾ. ಪೆಜೆಶ್ಕಿಯನ್: ‘ನಾವು ಎಂದಿಗೂ ತಲೆಬಾಗುವುದಿಲ್ಲ ಅಥವಾ ಮಂಡಿಯೂರುವುದಿಲ್ಲ’ ಎಂದು ಬರೆದುಕೊಂಡಿದೆ.

ಇರಾನ್ ಕಾನ್ಸುಲೇಟ್ ಮಾಡಿದ ಈ ‘ಮಾಸ್ ಎಡಿಟ್’ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಯಭಾರ ಕಚೇರಿಯೊಂದು ಇಷ್ಟೊಂದು ಕ್ರಿಯೇಟಿವ್ ಆಗಿ ಸಿನಿಮಾ ದೃಶ್ಯವನ್ನು ರಾಜಕೀಯ ಸಂದೇಶ ನೀಡಲು ಬಳಸಿಕೊಂಡಿರುವುದನ್ನು ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಜಾಗತಿಕ ರಾಜಕೀಯದ ಗಂಭೀರ ವಾತಾವರಣದ ನಡುವೆಯೂ ಭಾರತದ ಚಿತ್ರರಂಗದ ಪ್ರಭಾವ ಎಷ್ಟು ಗಟ್ಟಿಯಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಇರಾನ್ ‘ಬಾಹುಬಲಿ’ ಸಿನಿಮಾವನ್ನು ಸಂಕೇತವಾಗಿ ಬಳಸಿಕೊಂಡಿರುವುದು ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ.

Must Read