ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಹಸಗೂಸು ಸಾವನ್ನಪ್ಪಿದೆ ಎಂದು ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಹಸುಗೂಸಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಾಸನ ಹಿಮ್ಸ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಚಂದ್ರಕಲಾ-ನಂದಕುಮಾರ್ ದಂಪತಿಯ ಎರಡು ತಿಂಗಳ ಹಸುಗೂಸು ಮೃತಪಟ್ಟಿರುವುದು. ಸಂಜೆ ಹಾಲು ಕುಡಿದ ನಂತರ ವಿಪರೀತ ವಾಂತಿ ಮಾಡಿಕೊಂಡ ಹಸುಗೂಸನ್ನು ಪೋಷಕರು ಕೂಡಲೇ ಚಿಕ್ಕಮಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿದೆ ಹಾಸನಕ್ಕೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದ್ದಾರೆ.
ಪೋಷಕರು ಚಿಕ್ಕಮಗಳೂರಿನಿಂದ ಹಾಸನಕ್ಕೆ ಆಂಬ್ಯುಲೆನ್ಸ್‌ನಲ್ಲಿ ಜೀರೋ ಟ್ರಾಫಿಕ್ ಮೂಲಕ ಕರೆತಂದಿದ್ದಾರೆ. ಜಿಲ್ಲಾಸ್ಪತ್ರೆ ಆವರಣಕ್ಕೆ ಅಂಬ್ಯುಲೆನ್ಸ್ ಬಂದ ವೇಳೆ ಸರಿಯಾಗಿ ಸ್ಪಂದಿಸದ ವೈದ್ಯರು ಹಾಗೂ ಸಿಬ್ಬಂದಿಗಳು ಮಗುವಿಗೆ ತುರ್ತು ಅವಶ್ಯಕವಿದ್ದ ಆಕ್ಸಿಜನ್ ಹಾಕಲು ಖಾಲಿಯಾಗಿದ್ದ ಆಕ್ಸಿಜನ್ ಸಿಲಿಂಡರ್ ತಂದಿದ್ದಾರೆ.
ತರಬೇತಿ ವೈದ್ಯರು ಮಗುವನ್ನು ದಾಖಲಿಸಿಕೊಂಡು ಸರಿಯಾಗಿ ಚಿಕಿತ್ಸೆ ನೀಡದೆ ಹಾಗೂ ಹಿರಿಯ ವೈದ್ಯರು ಸಹ ವಿಳಂಬ ಮಾಡಿದ್ದಾರೆ. ಈ ವೇಳೆ ಸರಿಯಾದ ಚಿಕಿತ್ಸೆ ಸಿಗದೆ ಹಸುಗೂಸು ಸಾವನ್ನಪ್ಪಿದೆ.
ಮಗುವಿನ ಸಾವಿಗೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯ ಹಾಗೂ ಅವ್ಯವಸ್ಥೆ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿ, ತಪ್ಪಿತಸ್ಥ ವೈದ್ಯರು ಹಾಗೂ ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.