ಬಡಗುಶಬರಿಮಲೆ ಉಬ್ರಂಗಳ ದೇವಳ ಬ್ರಹ್ಮಕಲಶ: ಪಂಚಾಕ್ಷರೀ ಮಂತ್ರ, ಮಂಡಲ ವ್ರತಾಚರಣೆಗೆ ಶ್ರೀ ಕರೆ

ಹೊಸದಿಗಂತ ವರದಿ ಕಾಸರಗೋಡು :

ಜಿಲ್ಲೆಯ ಬದಿಯಡ್ಕ ಸಮೀಪದ ಪುಣ್ಯಕ್ಷೇತ್ರ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀಶಾಸ್ತಾರ ದೇವಸ್ಥಾನದಲ್ಲಿ ಡಿ.25ರಿಂದ ಜ.2ರ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ‌ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ನಡೆದ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಭಾಗವಹಿಸಿದರು.

ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀಗಳು, ಬ್ರಹ್ಮಕಲಶಕ್ಕೆ ಇನ್ನು ಇರುವ 48 ದಿನಗಳ ಕಾಲ ಪ್ರತಿಯೊಬ್ಬರೂ ವ್ರತಾಚರಣೆ ಕೈಗೊಂಡು ಬೌದ್ಧಿಕ ಹಾಗೂ ಮಾನಸಿಕವಾಗಿ ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಜೀವನದಲ್ಲಿ ಕ್ಷೇತ್ರ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಪುಣ್ಯದ ಕೆಲಸ. ಆ ಅವಕಾಶವನ್ನು ಚೆನ್ನಾಗಿ ಬಳಸಬೇಕು. ಈ ನಿಟ್ಟಿನಲ್ಲಿ ಇಲ್ಲಿನ ಭಕ್ತಾದಿಗಳು ಶಾರೀರಿಕವಾಗಿ ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಅದಲ್ಲದೇ ಮಾನಸಿಕವಾಗಿ ಅಂತ:ಕರಣದ ಶುದ್ಧಿಯಾಗಬೇಕು. ಭಗವಂತನಲ್ಲಿ ಎಲ್ಲವೂ ಇದೆ, ನಮ್ಮ ಉದ್ಧಾರಕ್ಕಾಗಿ ನಾವು ಭಗವಂತನ ಕೈ ಉಪಕರಣವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಧುಸೂದನ ಆಯರ್ ಅಧ್ಯಕ್ಷತೆ ವಹಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಮಾರ್ಗದರ್ಶಕ ಬ್ರಹ್ಮಶ್ರೀ ರವೀಶ ತಂತ್ರ ಕುಂಟಾರು, ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ. ಕಿಶೋರ್ ಕುಮಾರ್ ಕುಣಿಕುಳ್ಳಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಯು.ಬಿ. ಕುಣಿಕುಳ್ಳಾಯ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಪ್ರೊ. ಎ. ಶ್ರೀನಾಥ್, ಮಾತೃಮಂಡಳಿ ಗೌರವಾಧ್ಯಕ್ಷೆ ವಸಂತಿ ಟೀಚರ್, ಯುವ ಸಮಿತಿ ಅಧ್ಯಕ್ಷ ರಾಜೇಶ್ ಮಾಸ್ತರ್, ಮಾತೃಸಮಿತಿ ಅಧ್ಯಕ್ಷೆ ಪ್ರತಿಭಾ ಜಯರಾಜ್, ಕೂಪನ್ ಸಮಿತಿ ಅಧ್ಯಕ್ಷ ವಿಶ್ವನಾಥನ್ ಬಳ್ಳಪದವು, ಶ್ರೀ ಧರ್ಮಶಾಸ್ತಾ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಯುಸಿ ಮತ್ತಿತರರು ಉಪಸ್ಥಿತರಿದ್ದರು.

ಆರಂಭದಲ್ಲಿ ಡಾ. ಕಿಶೋರ್ ಕುಮಾರ್ ಸ್ವಾಗತಿಸಿ, ಜೀರ್ಣೋದ್ಧಾರ ಪ್ರಧಾನ ಕಾರ್ಯದರ್ಶಿ ಬಾಬು ಮಾಸ್ತರ್ ಅಗಲ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಶಿರಂತ್ತಡ್ಕ ವಂದಿಸಿ, ರಮೇಶ್ ಕೃಷ್ಣ ಪದ್ಮಾರು ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಗ್ರಾಮದಲ್ಲಿ ಬ್ರಹ್ಮಕಲಶೋತ್ಸವ ತನಕ ಮಂಡಲ ವ್ರತಾಚರಣೆಯನ್ನು ಆಚರಿಸುವ ಬಗ್ಗೆ ಕೊಂಡೆವೂರು ಶ್ರೀಗಳು ಮಾರ್ಗದರ್ಶನ ನೀಡಿದರು.

ಮಂಡಲ ವ್ರತಾಚರಣೆಗೆ ಕರೆ
ಬ್ರಹ್ಮಕಲಶೋತ್ಸವಕ್ಕೆ ಇನ್ನು 48 ದಿನಗಳು ಬಾಕಿಯಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಪಂಚಾಕ್ಷರೀ ಮಂತ್ರಜಪದೊಂದಿಗೆ ಪರಿಶುದ್ಧರಾಗಿ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀಗಳು ಕರೆಯಿತ್ತರು. ಕಾರ್ಯಕ್ರಮದ ಕೊನೆಯಲ್ಲಿ ಸೇರಿದ ಭಕ್ತವೃಂದಕ್ಕೆ ಶ್ರೀಗಳು ಪಂಚಾಕ್ಷರೀ ಮಂತ್ರವನ್ನು ಬೋಧಿಸಿ ದಿನನಿತ್ಯ ಜಪಿಸಬೇಕೆಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!