ಹೊಸದಿಗಂತ ಬಾಗಲಕೋಟೆ:
ಇಡೀ ರಾಜ್ಯದ ಗಮನ ಸೆಳೆದಿದ್ದ ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ತಮ್ಮ ಪ್ರತಿಸ್ಪರ್ಧಿಗಿಂತ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆರಂಭಿಕ ಹಂತದಿಂದಲೂ ಮುನ್ನಡೆ ಕಾಯ್ದುಕೊಂಡಿರುವ ಕಾಂಗ್ರೆಸ್, ಈಗ ಗೆಲುವಿನ ಸಮೀಪಕ್ಕೆ ಬಂದು ತಲುಪಿದೆ.
ಒಟ್ಟು 23 ಸುತ್ತುಗಳ ಮತ ಎಣಿಕೆ ನಿಗದಿಯಾಗಿದ್ದು, 20ನೇ ಸುತ್ತಿನ ಅಂತ್ಯಕ್ಕೆ ಲಭ್ಯವಿರುವ ಅಂಕಿಅಂಶಗಳ ಪ್ರಕಾರ:
ಉಮೇಶ್ ಮೇಟಿ (ಕಾಂಗ್ರೆಸ್): 83,455 ಮತಗಳು
ವೀರಣ್ಣ ಚರಂತಿಮಠ (ಬಿಜೆಪಿ): 66,984 ಮತಗಳು
ಸದ್ಯ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ಬಿಜೆಪಿಯ ವೀರಣ್ಣ ಚರಂತಿಮಠ ಅವರಿಗಿಂತ ಸುಮಾರು 16,471 ಮತಗಳ ದೊಡ್ಡ ಅಂತರದ ಮುನ್ನಡೆ ಸಾಧಿಸಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಮತಗಳನ್ನು ಪಡೆಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ನಗರ ಪ್ರದೇಶಗಳಲ್ಲಿ ಬಿಜೆಪಿಗೆ ಹೆಚ್ಚಿನ ಲೀಡ್ ಸಿಗಲಿದೆ ಎಂದು ಭಾವಿಸಿದ್ದ ಬಿಜೆಪಿ ನಾಯಕರಿಗೆ ನಿರಾಸೆಯಾಗಿದೆ. ನಗರ ಪ್ರದೇಶಗಳಲ್ಲೂ ಬಿಜೆಪಿಗೆ ನಿರೀಕ್ಷಿತ ಮಟ್ಟದಲ್ಲಿ ಮತಗಳು ಲಭಿಸದಿರುವುದು ಕಾಂಗ್ರೆಸ್‌ನ ಮುನ್ನಡೆಗೆ ಪ್ರಮುಖ ಕಾರಣವಾಗಿದೆ. ಹಿರಿಯ ನಾಯಕ ಎಚ್.ವೈ. ಮೇಟಿ ಅವರ ಪುತ್ರ ಉಮೇಶ್ ಮೇಟಿ ಅವರ ಪರವಾಗಿರುವ ಅನುಕಂಪದ ಅಲೆ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳು ಇಲ್ಲಿ ಕೈ ಹಿಡಿದಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು ಕೇವಲ 3 ಸುತ್ತುಗಳ ಮತ ಎಣಿಕೆ ಬಾಕಿ ಇದ್ದು, ಸದ್ಯದ ಟ್ರೆಂಡ್ ಗಮನಿಸಿದರೆ ಬಾಗಲಕೋಟೆ ಕೋಟೆಯಲ್ಲಿ ಕಾಂಗ್ರೆಸ್ ಧ್ವಜ ಹಾರುವುದು ಬಹುತೇಕ ಖಚಿತವಾಗಿದೆ.



