August 7, 2026
Friday, August 7, 2026
spot_img

ಸಲಿಂಗ ಪ್ರೀತಿಗೆ NO ಎಂದ ಪೋಷಕರು : ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾದ ಯುವತಿಯರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಲಿಂಗ ಪ್ರೀತಿಗೆ ಪೋಷಕರು ಒಪ್ಪಿಗೆ ನೀಡದ ಕಾರಣ ಮನನೊಂದ ಯುವತಿಯರಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಯಲಹಂಕದ ಶಿವನಹಳ್ಳಿಯಲ್ಲಿ ನಡೆದಿದೆ.

ಸಂಬಂಧಿಗಳಾಗಿದ್ದ ಸಿರ್ಜನಾ ಹಾಗೂ ರೀಟಾ ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮನೆಯಲ್ಲಿ, ಊರಿಗೆ ವಾಪಾಸ್‌ ಬನ್ನಿ, ಮದುವೆಯ ಪ್ರಸ್ತಾಪಗಳು ಬಂದಿವೆ ಎಂದು ಹೇಳುತ್ತಿದ್ದರು. ಆದರೆ ಸಲಿಂಗಕಾಮಿಗಳಾದ ಸಿರ್ಜನಾ ಹಾಗೂ ರೀಟಾಗೆ ಇನ್ಯಾರನ್ನೂ ಮದುವೆಯಾಗಲು ಇಷ್ಟವಿರಲಿಲ್ಲ.

ಮನೆಯವರಿಗೆ ತಾವು ಸಲಿಂಗಕಾಮಿಗಳು ಎನ್ನುವ ಮಾಹಿತಿಯನ್ನು ನೀಡಿ, ಪ್ರೀತಿ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಜೊತೆಗೆ ಮದುವೆಯಾಗಲು ಅನುಮತಿ ನೀಡಿ ಎಂದು ಕೇಳಿಕೊಂಡಿದ್ದಾರೆ. ಈ ವಿಚಾರವನ್ನು ಕೇಳಿ ಸಿಡಿಲು ಬಡಿದಂತೆ ಪೋಷಕರು ಪ್ರತಿಕ್ರಿಯೆ ನೀಡಿದ್ದಾರೆ.

ದೂರ ಇರೋಕೆ ಕಷ್ಟವಾಗಿತ್ತು!

ಪರಸ್ಪರ ಗಾಢ ಪ್ರೀತಿಯಲ್ಲಿದ್ದ ಸರ್ಜನಾ ಹಾಗೂ ರೀಟಾ ಬೆಂಗಳೂರಿನಲ್ಲಿಯೇ ಇದ್ದರೂ ದೂರ ದೂರದ ಏರಿಯಾಗಳಲ್ಲಿ ಇದ್ದರು. ಇದರಿಂದ ನಿತ್ಯದ ಭೇಟಿ ಅಸಾಧ್ಯವಾಗಿತ್ತು. ಒಟ್ಟಿಗೇ ಇರಬೇಕು ಎನ್ನುವುದು ಇವರಿಬ್ಬರ ಆಸೆಯಾಗಿತ್ತು. ಇದೇ ಕಾರಣಕ್ಕೆ ಒಂದೇ ಮನೆಯಲ್ಲಿ ಇರುವ ಮುನ್ನ ಪೋಷಕರ ಬಳಿ ಮಾತನಾಡಬೇಕೆಂದು ಊರಿಗೆ ಬಂದಿದ್ದರು.

ಕೆಲಸಕ್ಕೆ ಹೋಗಿ ಬರುತ್ತೇವೆ ಎಂದಿದ್ದರು

ಘಟನೆಗೂ ಮುನ್ನ ಬೆಳಗ್ಗೆ ನಾವು ಕೆಲಸಕ್ಕೆ ಹೋಗುತ್ತೀವಿ ಎಂದು ಹೇಳಿ ಇಬ್ಬರೂ ಮನೆಯಿಂದ ಹೊರಟಿದ್ದರು. ಆನಂತರ ಯಲಹಂಕದ ಶಿವನಹಳ್ಳಿ ಬಳಿಯ ನಿರ್ಜನ ಪ್ರದೇಶಕ್ಕೆ ತೆರಳಿದ್ದರು. ಮರುದಿನ ಬೆಳಗ್ಗೆ ಸಾರ್ವಜನಿಕರು ಇಬ್ಬರೂ ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಯಲಹಂಕ ಓಲ್ಡ್ ಟೌನ್ ಪೊಲೀಸರು ಹಾಗೂ ಫಾರೆನ್ಸಿಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಆರಂಭದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿರಲಿಲ್ಲ. ಹೀಗಾಗಿ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ಆದರೆ, ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಎರಡು ಕಿ.ಮೀ ದೂರದಲ್ಲಿ ಮತ್ತೊಂದು ಶವ!

ಈ ಆತ್ಮಹತ್ಯೆಯ ಸ್ಥಳದಿಂದ ಎರಡು ಕಿಲೋಮೀಟರ್‌ ದೂರದಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಜಕ್ಕೂರು ಶ್ರೀರಾಮಪುರ ಬಳಿಯ ರೈಲ್ವೆ ಹಳಿಯಲ್ಲಿ ಯುವಕನೊಬ್ಬ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಯುವಕನ ಸಾವಿಗೂ ಇಬ್ಬರು ಯುವತಿಯರ ಪ್ರಕರಣಕ್ಕೂ ಯಾವುದೇ ಸಂಬಂಧವಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಎರಡೂ ಘಟನೆಗಳ ನಡುವೆ ಲಿಂಕ್ ಇದೆಯೇ ಎಂಬುದನ್ನು ತನಿಖೆ ಮೂಲಕ ಪರಿಶೀಲಿಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !