ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ರೆ ಮಾತ್ರ ಬಜರಂಗದಳ ಸಂಘಟನೆಯನ್ನು ನಿಷೇಧ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಯಾರೂ ಸರಿಯಾಗಿ ಓದಿಲ್ಲ. ಶಾಂತಿ ಕದಡುವ ಕೆಲಸ ಮಾಡಿದ್ರೆ ಮಾತ್ರ ಬಜರಂಗದಳ ನಿಷೇಧ ಮಾಡುತ್ತೇವೆ. ಅಂತಹ ಕೆಲಸ ಮಾಡದೇ ಇದ್ದರೆ ಸುಮ್ಮನೆ ಯಾಕೆ ಬ್ಯಾನ್ ಮಾಡುತ್ತೇವೆ. ನಿಷೇಧ ಮಾಡುವ ಸಂದರ್ಭ ಬರಬಾರದು ಅಂತಾ ಅನಿಸುತ್ತದೆ ಎಂದರು.
ನೈತಿಕ ಪೊಲೀಸ್ ಗಿರಿ, ಕೋಮು ಚಟುವಟಿಕೆ ನಾವು ಸಹಿಸುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ. ಪಿಎಸ್ಐ ಹಗರಣದ ಪ್ರಕರಣ ಹೈಕೋರ್ಟ್ ನಲ್ಲಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ತಿಳಿಸಿದರು.
ನಾಳೆಯ ಸಚಿವ ಸಂಪುಟ ಸಭೆಯಲ್ಲಿ 5 ಗ್ಯಾರಂಟಿ ಯೋಜನೆಗಳ ಜಾರಿಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಪ್ರತಿಯೊಂದನ್ನು ಚರ್ಚೆ ಮಾಡಿಯೇ ಪ್ರಣಾಳಿಕೆಯಲ್ಲಿ ಸೇರಿಸಿದ್ದೇವೆ. 5 ಗ್ಯಾರಂಟಿಗಳನ್ನು ನಾವು ಅನುಷ್ಠಾನಕ್ಕೆ ತರುತ್ತೇವೆ. ಈಗಾಗಲೇ ಗ್ಯಾರಂಟಿಗಳ ಜಾರಿಗೆ ಮಾರ್ಗಸೂಚಿಗಳನ್ನು ಆಯಾ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಮಂಡಿಸಿದ್ದಾರೆ ಎಂದರು.