ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ್ದ ಕುಸ್ತಿಪಟು ಬಜರಂಗ್ ಪೂನಿಯಾಗೆ ಕೊಲೆ ಬೆದರಿಕೆ ಬಂದಿದೆ. ವಿದೇಶಿ ಸಂಖ್ಯೆಯಿಂದ ತನಗೆ ಬೆದರಿಕೆ ಸಂದೇಶ ಬಂದಿದೆ ಎಂದು ಬಜರಂಗ್ ಆರೋಪಿಸಿದ್ದಾರೆ.
ಆದಷ್ಟು ಬೇಗ ಕಾಂಗ್ರೆಸ್ ತೊರೆಯಬೇಕು ಇಲ್ಲದಿದ್ದರೆ ನಿಮಗೂ, ನಿಮ್ಮ ಕುಟುಂಬಕ್ಕೂ ಕಂಟಕ ಕಾದಿದೆ. ಇದು ನಮ್ಮ ಕೊನೆಯ ಸಂದೇಶ. ಚುನಾವಣೆಗೂ ಮುನ್ನ ನಾವೇನು ಎಂಬುದನ್ನು ತೋರಿಸುತ್ತೇವೆ. ನೀವು ಎಲ್ಲಿ ಬೇಕಾದರೂ ದೂರು ನೀಡಿ, ಇದು ನಮ್ಮ ಮೊದಲ ಮತ್ತು ಕೊನೆಯ ಎಚ್ಚರಿಕೆ’ ಎಂದು ಅನಾಮಿಕ ವ್ಯಕ್ತಿಯಿಂದ ಸಂದೇಶ ಬಂದಿದೆ ಎಂದು ಬಜರಂಗ್ ತಿಳಿಸಿದ್ದಾರೆ.
ಇನ್ನು ಬೆದರಿಕೆಯ ಸಂದೇಶ ಬಂದ ನಂತರ ಬಜರಂಗ್, ಸೋನಿಪತ್ ಬಹಲ್ಗಢ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಜರಂಗ್ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ವಕ್ತಾರ ರವೀಂದ್ರ ಸಿಂಗ್, ‘ಬಜರಂಗ್ ಪುನಿಯಾ ಸೋನಿಪತ್‌ನ ಬಹಲ್‌ಗಢ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರಿಗೆ ಹೊರಗಿನ ಸಂಖ್ಯೆಯಿಂದ ಸಂದೇಶ ಬಂದಿದೆ.
ಅವರ ದೂರಿನ ಮೇರೆಗೆ ಪೊಲೀಸ್ ತನಿಖೆ ಮುಂದುವರಿದಿದೆ. ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಅದರ ಬಗ್ಗೆ ತನಿಖೆ ನಡೆಯುತ್ತಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.