ಹೊಸದಿಗಂತ ವರದಿ, ವಿಜಯಪುರ:
ಬಹಿರಂಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಶಾಸಕರು ಬೆಂಬಲ ನೀಡುತ್ತಿದ್ದಾರೆ, ಆದರೆ ಅಂತರಂಗದಲ್ಲಿ ಅವರಲ್ಲಿ ಅನೇಕರಿಗೆ ಮುಖ್ಯಮಂತ್ರಿಯಾಗುವ ಹಂಬಲವಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ದೂರಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಯಾರು ಬೇಕಾದರೂ ಮುಖ್ಯಮಂತ್ರಿ ಆಗಿ ನನ್ನ ಅಭ್ಯಂತರವಿಲ್ಲ, ಸಿದ್ದರಾಮಯ್ಯ ಅವರ ವಿಷಯವಾಗಿ ತೀರ್ಪು ಬಗ್ಗೆ ಇಡೀ ದೇಶ ಕಾಯುತ್ತಿದೆ. ಸಿದ್ದರಾಮಯ್ಯ ಪರ ಬಂದರೆ ನಮ್ಮ ಅಭ್ಯಂತರವಿಲ್ಲ, ಸಿದ್ದರಾಮಯ್ಯ ವಿರುದ್ಧ ತೀರ್ಪು ಬಂದು, ನಾನು ನಾನು ಅಂತ ಹೇಳಿ ಬಡಿದಾಡಿ ಕಾಂಗ್ರೆಸ್ ಸರ್ಕಾರ ಕಳೆದುಕೊಳ್ಳುತ್ತೀರಿ. ಆದರೆ ಕಾಂಗ್ರೆಸ್ ಸರ್ಕಾರ ಐದು ವರ್ಷ ಅಧಿಕಾರದಲ್ಲಿರಲಿ ಎನ್ನುವುದು ನನ್ನ ಆಸೆ ಎಂದರು.
136 ಜನರನ್ನು ಜನತೆ ಆಯ್ಕೆ ಮಾಡಿ ಕಳುಹಿಸಿದ್ದಾರೆ, ಒಬ್ಬ ಮುಖ್ಯಮಂತ್ರಿ ಹೋದ ನಂತರ ಸರ್ಕಾರ ಬಡಿದಾಟದಲ್ಲಿ ಹೋಯ್ತು ಎಂಬ ಕೆಟ್ಟ ಆಪಾದನೆ ಹೊತ್ತುಕೊಳ್ಳಬೇಡಿ, ನಿಮಗೂ ಕೇಂದ್ರದ ನಾಯಕತ್ವ ಇದೆ, ಕುಳಿತು ಚರ್ಚೆ ಮಾಡಿ ಎಂದು ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿದರು.
ಆರ್‌ಎಸ್‌ಎಸ್ ಮೂಲಕ ಮತ್ತೆ ಬಿಜೆಪಿ ಸೇರುವ ಅವಶ್ಯಕತೆ ನನಗಿಲ್ಲ, ನಾನು ಆರ್‌ಎಸ್‌ಎಸ್‌ದವನೇ, ಬಿಜೆಪಿ ಹಾಗೂ ಬಿಎಸ್‌ವೈ ನಡೆ ಬಗ್ಗೆ ನೋವು ಇದೆ ಎಂದರು.
ನಾನು ರಾಯಣ್ಣ ಬ್ರಿಗೇಡ್ ಮಾಡಿದಾಗ ಯಡಿಯೂರಪ್ಪ ಅವರು ಅಮಿತ್ ಶಾ ಅವರ ಬಳಿ ಹೋಗಿ ಅದನ್ನು ನಿಲ್ಲಿಸುವಂತೆ ಹೇಳಿದ್ದರು. ಆಗ ಅಮೀತ್ ಶಾ ಅವರು ಹೇಳಿದ ಒಂದೇ ಮಾತಿಗೆ ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತನಾಗಿ ಆ ಚಟುವಟಿಕೆಯನ್ನು ನಿಲ್ಲಿಸಿದೆ. ಇಂಧನ ಸಚಿವನಾಗಿದ್ದಾಗ ರಾಜಿನಾಮೆ ಕೊಟ್ಟು ರಾಜ್ಯಾಧ್ಯಕ್ಷನಾಗು ಎಂದು ಹೇಳಿದರು, ಆಗಲೂ ಸಹ ಮಂತ್ರಿ ಸ್ಥಾನ ಬಿಟ್ಟು ಬಿಜೆಪಿ ರಾಜ್ಯಾಧ್ಯಕ್ಷನಾದೆ. ಅವರು ನೀಡಿದ ನಿರ್ದೇಶನದಂತೆ ನಡೆದುಕೊಂಡು ಬಂದರೆ, ಮೊನ್ನೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಡಿ ಎಂದಾಗಲೂ ಐದೇ ನಿಮಿಷದಲ್ಲಿ ಆಯ್ತು ಎಂದು ಪತ್ರ ಬರೆದು ಕಳುಹಿಸಿದೆ, ಆದರೆ ಮೋಸ ಪುನರಾವರ್ತನೆ ಆಗುತ್ತಲೇ ಬಂದಿತು ಎಂದರು.