ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಟ್ರಸ್ಟ್ ವತಿಯಿಂದ ತಿರುಮಲದ ಮಾದರಿಯಲ್ಲೇ ಜಮ್ಮುವಿನ ಮಜೀನ್ ಪ್ರದೇಶದ ಶಿವಾಲಿಕ್ ಅರಣ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ದೇಗುಲ ಅಂತಿಮ ಹಂತ ತಲುಪಿದ್ದು, ಜೂ.8ರಂದು ಉದ್ಘಾಟನೆಯಾಗಲಿದೆ.
ಅಂದಾಜು 30 ಕೋಟಿ ರೂ. ವೆಚ್ಚದಲ್ಲಿ 62 ಎಕರೆ ಪ್ರದೇಶದಲ್ಲಿ ತಿರುಪತಿ ಬಾಲಾಜಿ ದೇಗುಲ ನಿರ್ಮಾಣ ಮಾಡಲಾಗಿದೆ. ಇದು ಜಮ್ಮುವಿನಲ್ಲೇ ಅತ್ಯಂತ ದೊಡ್ಡ ದೇವಸ್ಥಾನವಾಗಲಿದೆ.
ಈಗಾಗಲೇ ಟಿಟಿಡಿ ವತಿಯಿಂದ ಹೈದರಾಬಾದ್, ಚೆನ್ನೈ, ಕನ್ಯಾಕುಮಾರಿ, ದೆಹಲಿ ಮತ್ತು ಭುವನೇಶ್ವರದಲ್ಲಿ ತಿರುಪತಿ ಬಾಲಾಜಿ ದೇಗುಲಗಳನ್ನು ನಿರ್ಮಿಸಲಾಗಿದೆ. ಟಿಟಿಡಿಯಿಂದ ನಿರ್ಮಿಸಲಾದ ಆರನೇ ದೇಗುಲ (ಜಮ್ಮು) ಇದಾಗಿದೆ.
“ದೇಗುಲ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯಗೊಂಡಿದೆ. ಜೂ.3ರಿಂದ ಧಾರ್ಮಿಕ ಕಾರ್ಯಗಳು ಆರಂಭವಾಗಲಿದೆ. ಜೂ.8ರಿಂದ ದೇಗುಲ ಪ್ರವೇಶಕ್ಕೆ ಮುಕ್ತವಾಗಲಿದೆ. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಸಂಪೂರ್ಣ ಉಚಿತವಾಗಿರಲಿದೆ. ತಿರುಮಲದಲ್ಲಿ ಹೇಗೆ ಧಾರ್ಮಿಕ ವ್ಯವಸ್ಥೆ ಜಾರಿಯಲ್ಲಿದೆಯೋ ಅದೇ ರೀತಿ ಇಲ್ಲೂ ಧಾರ್ಮಿಕ ಕ್ರಿಯೆಗಳನ್ನು ನಡೆಸಲಾಗುತ್ತದೆ,’ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಟಾ ರೆಡ್ಡಿ ಹೇಳಿದ್ದಾರೆ.