ನಿಯಮ ಮೀರಿದಲ್ಲಿ ಕಂಬಳಕ್ಕೆ ನಿಷೇಧ: ಓಟಗಾರರಿಗೆ ಎಚ್ಚರಿಕೆ ನೀಡಿದ ಸಮಿತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಗಂತಿನಲ್ಲಿ ಕೋಣಗಳನ್ನು ಬಿಡುವವರು ಅನಗತ್ಯವಾಗಿ ವಿಳಂಬ ಮಾಡಿದಲ್ಲಿ ಹಾಗೂ ಮಂಜೊಟ್ಟಿ ಮತ್ತು ಗಂತಿನಲ್ಲಿ ಓಟಗಾರರು ಕೋಣಗಳಿಗೆ ಹೊಡೆಯುವುದು ಸಾಬೀತಾದದಲ್ಲಿ ಅಂತಹವರನ್ನು ಮುಂದಿನ ಎರಡು ಕಂಬಳಗಳಿಗೆ ನೀಷೇಧಿಸುವ ಖಡಕ್ ಎಚ್ಚರಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ನೀಡಿದೆ.

ಮೂಡಬಿದಿರೆಯ ಒಂಟಿಕಟ್ಟೆ ಸೃಷ್ಟಿ ಗಾರ್ಡನ್ ಸಭಾಭವನದಲ್ಲಿ ಗುರುವಾರ ನಡೆದ ಜಿಲ್ಲಾ ಕಂಬಳ ಸಮಿತಿಯ ತುರ್ತು ಸಭೆಯಲ್ಲಿ ಈ ಕುರಿತು ನಿರ್ಣಯಿಸಲಾಯಿತು.

ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಬೆಳಪು ಡಾ.ದೇವಿ ಪ್ರಸಾದ್ ಶೆಟ್ಟಿ, ೨೪ ಗಂಟೆಗಳಲ್ಲಿ ಮುಕ್ತಾಯಗೊಳ್ಳಬೇಕಾಗಿದ್ದ ಕಂಬಳಗಳು ವಿನಃ ಕಾರಣ ವಿಳಂಬಗೊಳ್ಳುತ್ತಿದೆ. ಇದು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದ್ದು, ನಾವು ಸುಧಾರಣೆಗೊಳ್ಳದಿದ್ದರೆ ಕಂಬಳ ನಿಷೇಧಕ್ಕೆ ನಾವೇ ಅನುವು ಮಾಡಿಕೊಟ್ಟಂತಾಗುತ್ತದೆ ಕಳವಳ ವ್ಯಕ್ತಪಡಿಸಿದರು.

ಸಮಯ ಪರಿಪಾಲನೆಯನ್ನು ಕಟ್ಟುನಿಟ್ಟು ಮಾಡಲು ನಿಯಮಗಳನ್ನು ಮತ್ತಷ್ಟು ಬಲಗೊಳಿಸಲಾಗಿದೆ. ಒಬ್ಬ ಓಟಗಾರರನಿಗೆ ಪ್ರತಿ ವಿಭಾಗದಲ್ಲೂ ಒಂದು ಜೊತೆ ಕೋಣಗಳನ್ನು ಓಡಿಸಲು ಮಾತ್ರ ಅವಕಾಶವಿದೆ. ಅನಿವಾರ್ಯ ಸಂದರ್ಭದಲ್ಲಿ ತೀರ್ಪುಗಾರ ಹಾಗೂ ವ್ಯವಸ್ಥಾಪಕರ ಅನುಮತಿ ಪಡೆದ ಬಳಿಕ ಮಾತ್ರ ಎರಡು ಜೊತೆ ಕೋಣಗಳನ್ನು ಓಡಿಸಬಹುದು ಎಂದರು.

ಅಂಬ್ಯುಲೆನ್ಸ್ ಹಾಗೂ ಪ್ರಥಮ ಚಿಕಿತ್ಸೆ ಕೇಂದ್ರವನ್ನು ಎಲ್ಲ ಕಂಬಳಗಳಲ್ಲಿ ಕಡ್ಡಾಯಗೊಳಿಸಲಾಗುವುದು. ವ್ಯವಸ್ಥಾಪಕರು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದಲ್ಲಿ ಅವರೇ ವ್ಯವಸ್ಥೆಯನ್ನು ಕಲ್ಪಿಸುತ್ತಾರೆ ಎಂದು ಸಮಿತಿ ಅಧ್ಯಕ್ಷರು ಹೇಳಿದರು.

ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ, ಮಾಜಿ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳು, ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ತೀರ್ಪುಗಾರ ರಾಜೀವ್ ಶೆಟ್ಟಿ ಎಡ್ತೂರು, ಅಡ್ವೆ ಕಂಬಳದ ವ್ಯವಸ್ಥಾಪಕ ಕೊಳಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ ಸಹಿತ ಕಂಬಳದ ಪ್ರಮುಖರು ಉಪಸ್ಥಿತರಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!