May 17, 2026
Sunday, May 17, 2026
spot_img

ಬೆಂಗಳೂರಿನಲ್ಲಿ ಚಿನ್ನ, ಪೆಟ್ರೋಲ್ ಖರೀದಿಗೆ ಬ್ರೇಕ್: ಬಿಎಂಟಿಸಿ, ಮೆಟ್ರೋದತ್ತ ಮುಖ ಮಾಡಿದ ಜನಸಾಮಾನ್ಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಆರ್ಥಿಕ ಭದ್ರತೆ ಮತ್ತು ಹಿತಾಸಕ್ತಿಯನ್ನು ಕಾಯ್ದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಗೆ ಬೆಂಗಳೂರಿನ ನಾಗರಿಕರು ಅಭೂತಪೂರ್ವ ಬೆಂಬಲ ಸೂಚಿಸಿದ್ದಾರೆ. ಇದರ ನೇರ ಪರಿಣಾಮವಾಗಿ ಸಿಲಿಕಾನ್ ಸಿಟಿಯಲ್ಲಿ ಚಿನ್ನಾಭರಣ ಹಾಗೂ ಇಂಧನ ಮಾರಾಟದಲ್ಲಿ ಭಾರಿ ಇಳಿಕೆ ಕಂಡುಬಂದಿದೆ.

ರಾಜಧಾನಿ ಬೆಂಗಳೂರಿನಲ್ಲಿ ಆಭರಣ ಪ್ರಿಯರು ಚಿನ್ನ ಹಾಗೂ ಬೆಳ್ಳಿ ಖರೀದಿಯಿಂದ ಕೊಂಚ ದೂರ ಸರಿದಿದ್ದಾರೆ. ಮಾರುಕಟ್ಟೆ ಮೂಲಗಳ ಪ್ರಕಾರ, ನಗರದಲ್ಲಿ ಒಟ್ಟಾರೆ ಚಿನ್ನದ ವ್ಯಾಪಾರವು ಶೇಕಡಾ 50 ರಷ್ಟು ಕುಸಿತ ಕಂಡಿದೆ. ಸದಾ ಗ್ರಾಹಕರಿಂದ ಜಿಟಿಜಿಟಿ ಎನ್ನುತ್ತಿದ್ದ ಪ್ರಮುಖ ಜ್ಯುವೆಲ್ಲರಿ ಶಾಪ್‌ಗಳು ಈಗ ಜನರಿಲ್ಲದೆ ಬಿಕೋ ಎನ್ನುತ್ತಿವೆ. ಮದುವೆ ಮತ್ತು ಇತರ ಶುಭ ಸಮಾರಂಭಗಳಿದ್ದರೂ ಸಹ, ಸದ್ಯಕ್ಕೆ ಅನಿವಾರ್ಯವಾಗಿ ಬೇಕಾಗುವ ತಾಳಿ ಬೊಟ್ಟು, ಉಂಗುರಗಳಂತಹ ಅತ್ಯಗತ್ಯ ಆಭರಣಗಳನ್ನು ಮಾತ್ರ ಜನರು ಖರೀದಿಸುತ್ತಿದ್ದಾರೆ ಎಂದು ಸ್ಥಳೀಯ ವರ್ತಕರು ಅಳಲು ತೋಡಿಕೊಂಡಿದ್ದಾರೆ.

ಇನ್ನೊಂದೆಡೆ, ನಗರದಲ್ಲಿ ಇಂಧನ ಮಾರಾಟದಲ್ಲೂ ಗಮನಾರ್ಹ ಇಳಿಕೆಯಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಪ್ರತಿದಿನ ಸರಾಸರಿ 150 ರಿಂದ 250 ಲೀಟರ್‌ಗಳಷ್ಟು ಇಂಧನ ಮಾರಾಟ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಐಟಿ ಸಿಟಿಯ ನಾಗರಿಕರು ತಮ್ಮ ವೈಯಕ್ತಿಕ ಕಾರು ಮತ್ತು ಬೈಕ್‌ಗಳ ಬಳಕೆಯನ್ನು ಕಡಿಮೆ ಮಾಡಿ, ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಬಸ್‌ಗಳ ಸವಾರಿಗೆ ಆದ್ಯತೆ ನೀಡುತ್ತಿದ್ದಾರೆ. ಇದು ಮಾಲಿನ್ಯ ನಿಯಂತ್ರಣ ಮತ್ತು ಆರ್ಥಿಕ ಉಳಿತಾಯ ಎರಡಕ್ಕೂ ಪೂರಕವಾಗಿದೆ.

ಪ್ರಮುಖಾಂಶ: ದೇಶದ ಆರ್ಥಿಕ ಶಿಸ್ತಿಗೆ ಕೈಜೋಡಿಸಿರುವ ಬೆಂಗಳೂರಿಗರು, ಅನಗತ್ಯ ವೆಚ್ಚಗಳಿಗೆ ಬ್ರೇಕ್ ಹಾಕಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಳ್ಳುವ ಮೂಲಕ ಹೊಸ ಮಾದರಿಯನ್ನು ಸೃಷ್ಟಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !