ಪಿಎಫ್‌ಐ ನಿಷೇಧಿಸಿ: ಅಜಿತ್ ದೋವಲ್ ಗೆ ಮುಸ್ಲಿಮ್ ನಾಯಕರ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದಲ್ಲಿ ಮತ, ಸಿದ್ಧಾಂತಗಳ ಹೆಸರಿನಲ್ಲಿ ಹಿಂಸೆ ಮತ್ತು ತೀವ್ರವಾದವನ್ನು ಹರಡಲು ಕೆಲವು ಶಕ್ತಿಗಳು ಷಡ್ಯಂತ್ರ ನಡೆಸುತ್ತಿದ್ದು, ದೇಶದ ಎಲ್ಲ ನಾಗರಿಕರೂ ಇಂತಹ ಶಕ್ತಿಗಳ ವಿರುದ್ಧ ಒಟ್ಟಾಗಿ ಎದ್ದು ನಿಲ್ಲಬೇಕೆಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಶನಿವಾರ ಜನತೆಯನ್ನು ಆಗ್ರಹಿಸಿದ್ದಾರೆ .
ಅಖಿಲ ಭಾರತೀಯ ಸೂಫಿ ಸಜ್ಜದ್‌ನಾಶಿನ್ ಮಂಡಳಿ(ಎಐಎಸ್‌ಎಸ್‌ಸಿ)ದಿಲ್ಲಿಯಲ್ಲಿ ಆಯೋಜಿಸಿದ್ದ ಸಭೆಯೊಂದರಲ್ಲಿ ಮಾತನಾಡಿದ ದೋವಲ್ ಅವರು, ಕೆಲವು ಶಕ್ತಿಗಳು ದೇಶದಲ್ಲಿನ ವಾತಾವರಣವನ್ನು ಕದಡಿ ಭಾರತದ ಅಭಿವೃದ್ಧಿಯ ಪಥವನ್ನು ಉಧ್ವಸ್ತಗೊಳಿಸಲು ಸಂಚು ನಡೆಸುತ್ತಿವೆ.ಇವು ಮತ, ಸಿದ್ಧಾಂತಗಳ ಹೆಸರಿನಲ್ಲಿ ದೇಶದಲ್ಲಿ ಕಟ್ಟರ್‌ವಾದ ಮತ್ತು ಸಂಘರ್ಷವನ್ನು ಸೃಷ್ಟಿಸಲು ಮುಂದಾಗಿವೆ.ಇದು ಇಡಿ ದೇಶಕ್ಕೇ ಮಾರಕವಲ್ಲದೆ, ಇತರ ದೇಶಗಳಿಗೂ ಹರಡುವ ಅಪಾಯವಿದೆ.ಮತೀಯ ದ್ವೇಷಕ್ಕೆ ಪ್ರತಿಯಾಗಿ ನಾವು ಒಟ್ಟಾಗಿ ಎದ್ದು ನಿಲ್ಲಬೇಕು.ನಾವು ಭಾರತೀಯರು ಎಂಬ ಭಾವನೆ ಹೊಂದಿರುವ ಎಲ್ಲ ಧಾರ್ಮಿಕ ಮಂಡಳಿಗಳು ಒಟ್ಟಾಗಿ ಇಂತಹ ಷಡ್ಯಂತ್ರವನ್ನು ಸೋಲಿಸಬೇಕಾಗಿದೆ ಎಂಬುದಾಗಿ ಅವರು ಕರೆಯಿತ್ತರು.
ಪಿಎಫ್‌ಐ ನಿಷೇಧಕ್ಕೆ ಸೂಫಿ ಮಂಡಳಿ ನಿರ್ಣಯ ಆಗ್ರಹ
ಸೂಫಿ ಮಂಡಳಿ ಆಯೋಜಿಸಿದ್ದ ಈ ಅಂತರ್‌ನಂಬಿಕೆ ಸಮ್ಮೇಳನದಲ್ಲಿ ದೇಶವಿರೋ ಚಟುವಟಿಕೆಗಳಲ್ಲಿ ತೊಡಗಿರುವಂತಹ ಯಾವುದೇ ವ್ಯಕ್ತಿ ಮತ್ತು ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು , ದೇಶದ ನಾಗರಿಕರ ನಡುವಣ ಸೌಹಾರ್ದ ಕದಡುವ ಮತ್ತು ರಾಷ್ಟ್ರಘಾತಕ ಕೃತ್ಯಗಳಲ್ಲಿ ತೊಡಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ಮತ್ತು ಇತರ ಅಂತಹ ಸಂಘಟನೆಗಳ ವಿರುದ್ಧ ನೆಲದ ಕಾನೂನಿಗನುಗುಣವಾಗಿ ಖಡಕ್ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.ಅಷ್ಟೇ ಅಲ್ಲದೆ ಸಮುದಾಯಗಳ ನಡುವೆ ದ್ವೇಷ ಹರಡುವ ವ್ಯಕ್ತಿ ಮತ್ತು ಸಂಘಟನೆಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದೂ ನಿರ್ಣಯ ಕರೆ ನೀಡಿತು.
ಯಾವುದೇ ದೇವ, ದೇವಿ, ಪ್ರವಾದಿಗಳ ನಿಂದಿಸುವವರ ವಿರುದ್ಧ ಕಾನೂನಿನಡಿ ಕ್ರಮ
ದೇಶದಲ್ಲಿ ಯಾವುದೇ ದೇವ, ದೇವಿಯರು, ವಿವಿಧ ಮತ ಪ್ರವಾದಿಗಳನ್ನು ಗುರಿಪಡಿಸಿ ನಿಂದಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.ಈ ಬಗ್ಗೆ ನಾವು ಮೂಕಪ್ರೇಕ್ಷಕರಾಗಿರಲು ಸಾಧ್ಯವಿಲ್ಲ ಎಂದರು ದೋವಲ್ . ಜಗತ್ತಿನಲ್ಲಿ ಇಂದು ಸೌಹಾರ್ದ ಕದಡುವ ಶಕ್ತಿಗಳ ಅಟ್ಟಹಾಸವನ್ನು ಉಲ್ಲೇಖಿಸಿದ ದೋವಲ್, ಇಂತಹ ಪಿಡುಗನ್ನು ಹತ್ತಿಕ್ಕಲು ದೇಶ ಒಗ್ಗಟ್ಟಿನಿಂದ ಇರಬೇಕಾದುದು ಮುಖ್ಯ ಎಂದು ಒತ್ತಿ ಹೇಳಿದರು.
ಘಾತಕ ಶಕ್ತಿಗಳ ವಿರುದ್ಧ ಮೌನ ತೊರೆದು ಒಂದಾಗಿ ಧ್ವನಿ ಎತ್ತಿ
ಇಂತಹ ಸೌಹಾರ್ದ ಕದಡುವ ಶಕ್ತಿಗಳ ವಿರುದ್ಧ ದೇಶದ ಜನತೆ ಮೌನ ತೊರೆದು ಒಂದಾಗಿ ಧ್ವನಿ ಎತ್ತಬೇಕು . ಇದಕ್ಕಾಗಿ ಭಾರತದ ಎಲ್ಲ ನಾಗರಿಕರು , ಎಲ್ಲ ಮತಧರ್ಮಗಳ ಜನತೆ ಒಂದಾಗಿ ಕೆಲಸ ಮಾಡಬೇಕಾಗಿದೆ.ಭಾರತದಲ್ಲಿ ಪ್ರತಿಯೊಂದು ಮತಧರ್ಮಕ್ಕೂ ಮುಕ್ತ ಸ್ವಾತಂತ್ರ್ಯ ಇರುವುದಕ್ಕಾಗಿ ನಾವು ಹೆಮ್ಮೆ ಪಡಬೇಕಾಗಿದೆ ಎಂದು ದೋವಲ್ ನುಡಿದರು.
ಭಾರತ ಅಭಿವೃದ್ಧಿ ಹೊಂದುವುದು ಎಂದರೆ ದೇಶದ ಎಲ್ಲ ಮತ, ಧರ್ಮಗಳ ಜನರಿಗೂ ಅದರ ಲಾಭ ಲಭಿಸಿ ಎಲ್ಲರೂ ಅಭಿವೃದ್ಧಿ ಹೊಂದುವುದು ಎಂದೇ ಅರ್ಥ ಎಂಬುದಾಗಿ ಅಜಿತ್ ದೋವಲ್ ತಿಳಿಸಿದರು.
ಮತಾಂಧ ಸಂಘಟನೆಗಳ ವಿರುದ್ಧ
ಕ್ರಮಕ್ಕೆ ಕಾಲ ಕೂಡಿ ಬಂದಿದೆ:ಸೂಫಿ ನಾಯಕ
ಸಮ್ಮೇಳನದಲ್ಲಿ ಸೂಫಿ ಮಂಡಳಿಯ ಅಧ್ಯಕ್ಷ ಹಜ್ರತ್ ಸಯ್ಯದ್ ನಾಸೆರುದ್ದೀನ್ ಛಿಸ್ಟಿ ಅವರು ಮಾತನಾಡಿ, ಮತಾಂಧ ಸಂಘಟನೆಗಳ ನಿಗ್ರಹ ಮತ್ತು ನಿಷೇಧ ಇಂದಿನ ಅಗತ್ಯವಾಗಿದೆ. ನಾವು ಯಾವುದೇ ದುರದೃಷ್ಟಕರ ಘಟನೆಗಳು ಸಂಭವಿಸಿದಾಗಲಷ್ಟೇ ಖಂಡಿಸುತ್ತೇವೆ . ಆದರೆ ಈಗ ಮತಾಂಧ ಮತ್ತು ತೀವ್ರವಾದಿ ಸಂಘಟನೆಗಳ ವಿರುದ್ಧ ಸಾಕ್ಷಿಗಳಿದ್ದಲ್ಲಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳುವ ಸಮಯ ಬಂದಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!