ಹೊಸದಿಗಂತ ವರದಿ, ಮಂಗಳೂರು:
ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಅವರ ಭಾವಚಿತ್ರಕ್ಕೆ ಮತ್ತು ರಾಷ್ಟ್ರಧ್ವಜಕ್ಕೆ ಶಿವಮೊಗ್ಗದಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐನ ಮತಾಂಧ ಶಕ್ತಿಗಳು ಅವಮಾನ ಮಾಡಿರುವುದು ಖಂಡನೀಯ. ಸಮಾಜದಲ್ಲಿ ಪದೇ ಪದೇ ಅಶಾಂತಿ ಸೃಷ್ಟಿಸುತ್ತಿರುವ ರಾಷ್ಟ್ರವಿರೋಧಿಗಳಾದ ಪಿಎಫ್‌ಐ ಮತ್ತು ಎಸ್‌ಡಿಪಿಐಯನ್ನು ನಿಷೇಧಿಸಬೇಕು ಎಂದು ವಿಶ್ವಹಿಂದು ಪರಿಷತ್, ಬಜರಂಗದಳ ಆಗ್ರಹಿಸಿದೆ.
ಸ್ವಾತಂತ್ರ್ಯವೀರ ಸಾವರ್ಕರ್ ಅವರನ್ನು ಮತಾಂಧ ಶಕ್ತಿಗಳು ಅವಮಾನಿಸುತ್ತಿರುವುದು ಇಡೀ ಸ್ವಾತಂತ್ರ್ಯ ಹೋರಾಟಕ್ಕೆ ಎಸಗಿದ ಅಪಚಾರವಾಗಿದೆ. ಮಂಗಳೂರಿನ ಗುರುಪುರ ಸಹಿತ ರಾಜ್ಯದ ಕೆಲ ಭಾಗಗಳಲ್ಲಿ ಸಾವರ್ಕರ್ ಅವರಿಗೆ ಅವಮಾನ ಮಾಡಿರುವುದನ್ನು ನಾವು ಸಹಿಸುವುದಿಲ್ಲ. ಇದು ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವಾಗಿದೆ. ಇಂತಹ ರಾಷ್ಟ್ರವಿರೋಧಿ ಶಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಬೇಕು, ಪಿಎಫ್‌ಐ, ಎಸ್‌ಡಿಪಿಐನ ದೇಶದ್ರೋಹಿಗಳ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ವಿಹಿಂಪ ವಿಭಾಗ ಕಾರ್ಯದರ್ಶಿ ದೇವಿಪ್ರಸಾದ ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಪಿಎಫ್ ಐ ಮತ್ತು ಎಸ್‌ಡಿಪಿಐಯನ್ನು ನಿಷೇಧಿಸಬೇಕು ಎಂದು ವಿಹಿಂಪ, ಬಜರಂಗದಳ ಹಿಂದಿನಿಂದಲೂ ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಆಗ್ರಹಿಸುತ್ತಲೇ ಬಂದಿದೆ. ಈ ಬಾರಿಯಾದರೂ ಇವೆರಡು ಸಂಘಟನೆಗಳನ್ನು ಸರಕಾರ ನಿಷೇಧಿಸುವ ವಿಶ್ವಾಸವಿದೆ. ಈ ಎರಡೂ ಸಂಘಟನೆಗಳ ನಿಷೇಧಕ್ಕೆ ಕಾಂಗ್ರೆಸ್ ಅಥವಾ ಬೇರೆ ಮುಸ್ಲಿಂ ಸಂಘಟನೆಗಳು ಒತ್ತಾಯಿಸಿದರೆ ಅದಕ್ಕೆ ನಮ್ಮ ಸಹಮತ, ಬೆಂಬಲ ಇದೆ. ಜತೆಗೆ ಇಂತಹಾ ರಾಷ್ಟ್ರವಿರೋಧಿ ಶಕ್ತಿಗಳ ಬಗ್ಗೆ ಸಮಾಜದಲ್ಲಿ ಇನ್ನಷ್ಟು ಜಾಗೃತಿ ಆಗಬೇಕಿದೆ ಎಂದು ದೇವಿಪ್ರಸಾದ ಶೆಟ್ಟಿ ಹೇಳಿದರು.
ಸಾರ್ವಕರ್ ಅವರ ಹೆಸರಿನ ಜತೆಗೇ ಸ್ವಾತಂತ್ರ್ಯ ವೀರ ಎಂಬ ಬಿರುದು ಇದೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಾವರ್ಕರ್ ಹೊಸ ದಿಕ್ಕು ನೀಡಿದವರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಅವರು ಎರಡು ಬಾರಿ ಕ್ರೂರವಾದ ಕರಿನೀರಿನ ಶಿಕ್ಷೆ ಅನುಭವಿಸಿದ್ದಾರೆ. 27 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಕ್ರಾಂತಿಕಾರಿಗಳಿಗೆ ಹೋರಾಟದ ಪ್ರೇರಣೆ ನೀಡಿದ್ದಾರೆ. ಅಂತವರನ್ನು ಅಮಾನಿಸುತ್ತಿರುವುದು ಅಕ್ಷಮ್ಯ ಎಂದರು.
ಸಾವರ್ಕರ್ ಅವರ ಹೋರಾಟದ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಇನ್ನಷ್ಟು ಗೌರವ ತೋರಬೇಕಿದೆ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಆಗಬೇಕು. ಈ ಕುರಿತಾಗಿ ಅಭಿಯಾನ ಕೈಗೊಳ್ಳಲಾಗುವುದು ಎಂದರು.
ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್, ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಉಪಸ್ಥಿತರಿದ್ದರು.