ಭಾರತದ ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ತಂದೆ ಬನಾರಸಿ ಲಾಲ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ಮೊದಲ ಮಹಿಳಾ ಗಗನಯಾತ್ರಿ ದಿವಂಗತ ಕಲ್ಪನಾ ಚಾವ್ಲಾ ಅವರ ತಂದೆ ಬನಾರಸಿ ಲಾಲ್ ಚಾವ್ಲಾ (94) ನಿಧನರಾಗಿದ್ದಾರೆ.

ಹರಿಯಾಣದ ಕರ್ನಲ್​ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಬನಾರಸಿ ಚಾವ್ಲಾ ಕೊನೆಯುಸಿರೆಳೆದಿದ್ದು, ಅವರು ಸಮಾಜ ಸೇವೆ ಮೂಲಕ ಜನಮಾನಸದಲ್ಲಿ ಗುರುತಿಸಿಕೊಂಡಿದ್ದರು.

ಅವರ ಮೃತದೇಹವನ್ನು ಇಚ್ಛೆಯಂತೆ ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗಾಗಿ ದಾನ ಮಾಡಲಾಗಿದೆ.

ಬನಾರಸಿ ಲಾಲ್ ಚಾವ್ಲಾ ತಮ್ಮ ಇಡೀ ಜೀವನವನ್ನು ಸಮಾಜಸೇವೆಗೆ ಮುಡಿಪಾಗಿಟ್ಟರು. ಬಡ ಹೆಣ್ಣುಮಕ್ಕಳಿಗೆ ಉಚಿತ ಕಂಪ್ಯೂಟರ್ ತರಬೇತಿ ಮತ್ತು ಇತರ ಕೋರ್ಸ್‌ಗಳನ್ನು ಕಲಿಯಲು ಪ್ರೋತ್ಸಾಹಿಸುತ್ತಿದ್ದರು. ಇದಲ್ಲದೇ ಉಚಿತ ಶಿಕ್ಷಣ ನೀಡುವಂತಹ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದರು. ಯಾವುದೇ ಸಮಾರಂಭದಲ್ಲಿ ಹೂಗುಚ್ಛಗಳಾಗಲಿ ಅಥವಾ ಉಡುಗೊರೆಗಳನ್ನಾಗಲಿ ಅವರು ಸ್ವೀಕರಿಸುತ್ತಿರಲಿಲ್ಲ. ಅತಂತ್ಯ ಸರಳ ಜೀವನ ನಡೆಸುತ್ತಿದ್ದ ಅವರ ನಿಧನದಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ‘ಹರಿಯಾಣದ ಮಗಳು ಕಲ್ಪನಾ ಚಾವ್ಲಾ ಅವರ ತಂದೆ ಬನಾರಸಿ ಲಾಲ್ ಚಾವ್ಲಾ ಅವರ ನಿಧನದ ಬಗ್ಗೆ ಸುದ್ದಿ ಕೇಳಿ ದುಃಖವಾಗಿದೆ. ಅವರು ತಮ್ಮ ಮಗಳಿಗೆ ಕನಸು ಕಾಣಲು ಮತ್ತು ನಕ್ಷತ್ರಗಳನ್ನು ತಲುಪಲು ಸ್ವಾತಂತ್ರ್ಯವನ್ನು ನೀಡಿದ್ದರು. ಇದರಿಂದ ಪ್ರಪಂಚದಾದ್ಯಂತ ಭಾರತದ ವೈಭವ ಹೆಚ್ಚಿತು ಮತ್ತು ಇತರ ಹೆಣ್ಣುಮಕ್ಕಳಿಗೂ ಸ್ಫೂರ್ತಿ ತುಂಬಿತ್ತು. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಮತ್ತು ದುಃಖತಪ್ತ ಕುಟುಂಬಕ್ಕೆ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಪೋಸ್ಟ್​ ಮಾಡಿದ್ದಾರೆ.

ಮಗಳ ಹೆಸರಿನ ಕಾಲೇಜಿಗೆ ಮೃತದೇಹ ದಾನ:
ಸಾಮಾಜಿಕ ಕಾರ್ಯಕರ್ತರಾಗಿದ್ದ ಬನಾರಸಿ ಲಾಲ್​ ಚಾವ್ಲಾ ಅವರು ತಮ್ಮ ಮಗಳು ಕಲ್ಪನಾ ಚಾವ್ಲಾ ಅವರಿಗೆ ಉತ್ತಮ ಶಿಕ್ಷಣ ಕೊಡಿಸಿದ್ದರು. ಬಾಹ್ಯಾಕಾಶ ಸಂಶೋಧನೆಯಲ್ಲಿ ತೊಡಲು ಎಲ್ಲ ರೀತಿಯಲ್ಲೂ ಬೆಂಬಲವಾಗಿ ನಿಂತಿದ್ದರು. ಇದರಿಂದ 1997ರಲ್ಲಿ ಮಗಳು ಕಲ್ಪನಾ ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಸಾಧ್ಯವಾಗಿತ್ತು. ಆದರೆ, 2003ರ ಫೆಬ್ರವರಿ 1ರಂದು ಕೊಲಂಬಿಯಾ ಗನನನೌಕೆ ಪತನಗೊಂಡು ಅವರು ಮೃತಪಟ್ಟಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!