ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಪ್ರವಾಸಿ ಬಾಂಗ್ಲಾದೇಶ ತಂಡ 149 ರನ್ಗಳಿಗೆ ಆಲೌಟ್ ಆಗಿದೆ.
ಇದರೊಂದಿಗೆ ಟೀಂ ಇಂಡಿಯಾಗೆ ಮೊದಲ ಇನ್ನಿಂಗ್ಸ್ನಲ್ಲಿ 227 ರನ್ಗಳ ಮುನ್ನಡೆ ಸಿಕ್ಕಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ರೋಹಿತ್ ಪಡೆ 376 ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 339 ರನ್ ಕಲೆಹಾಕಿದ್ದ ಟೀಂ ಇಂಡಿಯಾ ಎರಡನೇ ದಿನದಾಟದ ಮೊದಲ ಸೆಷನ್ನಲ್ಲೇ ಕೇವಲ 37 ರನ್ ಕಲೆಹಾಕಿ ಉಳಿದ 4 ವಿಕೆಟ್ಗಳನ್ನು ಕಳೆದುಕೊಂಡಿತು.
ಬಾಂಗ್ಲಾ ತಂಡ 40 ರನ್ ಕಲೆಹಾಕುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಭಾರತದ ವೇಗಿಗಳ ಕರಾರುವಕ್ಕಾದ ದಾಳಿಗೆ ಬೆದರಿದ ಬಾಂಗ್ಲಾ ಬ್ಯಾಟರ್ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಬಾಂಗ್ಲಾದೇಶ ತಂಡ 100 ರನ್ಗಳ ಒಳಗೆ ಆಲೌಟ್ ಆಗುವಂತೆ ಕಾಣುತ್ತಿತ್ತು. ಆದರೆ 6ನೇ ವಿಕೆಟ್ಗೆ ಜೊತೆಯಾದ ಅನುಭವಿ ಬ್ಯಾಟರ್ಗಳಾದ ಶಕೀಬ್ ಅಲ್ ಹಸನ್ ಹಾಗೂ ಲಿಟನ್ ದಾಸ್ 50 ರನ್ಗಳ ಜೊತೆಯಾಟವನ್ನಾಡಿದರು.
ಅಂತಿಮವಾಗಿ ಈ ಜೊತೆಯಾಟ ಮುರಿದ ಬಳಿಕ ಬಾಂಗ್ಲಾದೇಶದ ಬಾಲಂಗೋಚಿಗಳ ಪೆವಿಲಿಯನ್ ಪರೇಡ್ ಆರಂಭವಾಯಿತು. ಬಾಂಗ್ಲಾ ಪರ ಶಕೀಬ್ ಅಲ್ ಹಸನ್ ಅತ್ಯಧಿಕ 32 ರನ್ ಬಾರಿಸಿದರೆ, ಲಿಟನ್ ದಾಸ್ 22 ರನ್ಗಳ ಕಾಣಿಕೆ ನೀಡಿದರು. ಕೊನೆಯಲ್ಲಿ 27 ರನ್ಗಳ ಇನ್ನಿಂಗ್ಸ್ ಆಡಿದ ಆಲ್‌ರೌಂಡರ್ ಮೆಹದಿ ಹಸನ್ ತಂಡ 149 ರನ್ ಕಲೆಹಾಕುವಲ್ಲಿ ನೆರವಾದರು.
ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ಜಸ್ಪ್ರೀತ್ ಬುಮ್ರಾ 11 ಓವರ್ಗಳಲ್ಲಿ 50 ರನ್ ನೀಡಿ 4 ವಿಕೆಟ್ ಪಡೆದರು. ಇದರೊಂದಿಗೆ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 400 ವಿಕೆಟ್ ಪೂರೈಸಿದ ಸಾಧನೆಯನ್ನು ಮಾಡಿದರು. ಉಳಿದಂತೆ ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರೆ, ಬ್ಯಾಟಿಂಗ್ನಲ್ಲಿ ಶತಕ ಬಾರಿಸಿದ್ದ ಅಶ್ವಿನ್ಗೆ ಬೌಲಿಂಗ್ನಲ್ಲಿ ಮಾತ್ರ ಯಾವುದೇ ವಿಕೆಟ್ ಸಿಗಲಿಲ್ಲ.