ಅಕ್ರಮ ಮರಳುಗಾರಿಕೆ, ಬಾಕ್ಸೈಟ್ ಸಾಗಾಟ ಅಡ್ಡೆಗೆ ಬಂಟ್ವಾಳ ತಹಶಿಲ್ದಾರ್ ದಾಳಿ

ಹೊಸದಿಗಂತ ವರದಿ, ವಿಟ್ಲ:

ಅಕ್ರಮ ಮರಳುಗಾರಿಕೆ ಹಾಗೂ ಅಕ್ರಮ ಬಾಕ್ಸೈಟ್ ಅಗೆಯುವ ಸ್ಥಳಕ್ಕೆ ಬಂಟ್ವಾಳ ತಹಶಿಲ್ದಾರ್ ಅರ್ಚನಾ ಭಟ್ ನೇತೃತ್ವದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳ ತಂಡ ದಾಳಿಯನ್ನು ನಡೆಸಿದೆ.

ಕುಡ್ತಮುಗೇರು ಹಾಗೂ ಗಡಿಪ್ರದೇಶವಾದ ಕನ್ಯಾನ ಪಾದೆಕಲ್ಲು ಎಂಬಲ್ಲಿಗೆ ಬೆಳಗ್ಗಿನ ಜಾವ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಹಠಾತ್ ದಾಳಿ ನಡೆಸಿ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ ಗೆ ಹಸ್ತಾಂತರ ಮಾಡಿ ಪ್ರಕರಣವನ್ನು ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ಕುಡ್ತಮುಗೇರಿನಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುವ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಸುಮಾರು ೩೦ಕ್ಕೂ ಅಧಿಕ ಪಿಕಪ್ ಲೋಡ್ ಮರಳು ರಾಶಿ ಸ್ಥಳದಲ್ಲಿ ಸಂಗ್ರಹಿಸಿದ್ದು, ಮ್ಯಾನ್ ಪವರ್ ಉಪಯೋಗಿಸಿ ಮರಳು ತೆಗೆಯಲು ಉಪಯೋಗಿಸುವ ಸೊತ್ತುಗಳು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕ ಗಡಿ ಭಾಗವಾದ ಕನ್ಯಾನದ ಪಾದೆಕಲ್ಲಿನಲ್ಲಿ ಬೃಹತ್ ಮಟ್ಟದಲ್ಲಿ ಬಾಕ್ಸೈಟ್ ಅಗೆಯುತ್ತಿದ್ದು, ಅಕ್ರಮವಾಗಿ ಸಾಗಿಸಲಾಗುತ್ತದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ದಾಳಿ ನಡೆಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಘಟಕದ ದಾಖಲೆ ಪತ್ರಗಳನ್ನು ಕಂದಾಯ ಇಲಾಖೆಗೆ ನೀಡುವಂತೆ ತಹಶಿಲ್ದಾರ್ ಮಾಲೀಕರಿಗೆ ತಿಳಿಸಿದ್ದು, ಈ ಪ್ರಕರಣವನ್ನು ಗಣಿಇಲಾಖೆಗೆ ಹಸ್ತಾಂತರಿಸಲಾಗಿದೆ.

ವಿಟ್ಲ ಕಂದಾಯ ಅಧಿಕಾರಿ ರವಿ ಎಂ.ಎನ್., ಗ್ರಾಮ ಆಡಳಿತಾಧಿಕಾರಿ ಕರಿಬಸಪ್ಪ ನಾಯಕ್, ಗ್ರಾಮ ಸಹಾಯಕರಾದ ಗಿರೀಶ್ ಶೆಟ್ಟಿ, ರುಕ್ಮಯ್ಯ ಮೂಲ್ಯ, ಲಿಂಗಪ್ಪ ಗೌಡ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!