ಹೊಸದಿಗಂತ ವರದಿ,ಬಂಟ್ವಾಳ :
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಾದ್ಯಂತ ಎಡೆಬಿಡದೆ ಮಳೆಯಾಗುತ್ತಿದ್ದು, ಪಾಣೆಮಂಗಳೂರು, ಬಂಟ್ವಾಳ ಸಹಿತ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಮಂಗಳವಾರ ಬೆಳಗ್ಗೆಯಿಂದಲೇ ನೇತ್ರಾವತಿ ನದಿ ಅಪಾಯದ ಮಟ್ಟವನ್ನು ಮೀರಿ ಮೈದುಂಬಿಹರಿದಿದ್ದು, ಸಂಜೆ 6 ಗಂಟೆಯ ವೇಳೆಗೆ ನೇತ್ರಾವತಿ ನದಿ 9.9 ಮೀ.ನಲ್ಲಿ ಮೈದುಂಬಿ ಹರಿದಿರುವುದರಿಂದ ಬಂಟ್ವಾಳದಲ್ಲಿ ಎಲ್ಲೆಲ್ಲು ನೀರೆ ನೀರು ಕಂಡುಬಂತು.
ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಅಪಾಯದ ಮಟ್ಟ ಮೀರಿ ನೇತ್ರಾವತಿ ನದಿಯಲ್ಲಿ ದಾಖಲೆ ಪ್ರಮಾಣದಲ್ಲಿ ನೀರು ಉಕ್ಕಿ ಹರಿದಿದೆ. ಇನ್ನಷ್ಟು ಹೆಚ್ಚು ಪ್ರಮಾಣದಲ್ಲಿ ನೀರು ಹರಿಯುವ ನಿರೀಕ್ಷೆ ಇದೆ. ಮಳೆಯ ತೀವ್ರತೆ ಕೂಡ ಅಷ್ಟೇ ಪ್ರಮಾಣದಲ್ಲಿರುವುದರಿಂದ ಬಂಟ್ವಾಲ ಜನತೆ ರಾತ್ರಿಯಿಡಿ ಜಾಗರಣೆ ಸ್ಥಿತಿಯಲ್ಲಿರುವ ಸನ್ನಿವೇಶ ಸೃಷ್ಠಿಯಾಗಿದೆ.
ಪಾಣೆಮಂಗಳೂರು, ಬಂಟ್ವಾಳ, ಸರಪಾಡಿ,ಜಕ್ರಿಬೆಟ್ಟಿನ ಕೊಟ್ರಕಣಿ, ಕಂಚಿಕಾರ ಪೇಟೆ,ಬಸ್ತಿಪಡ್ಪ ,ಬಡ್ಡಕಟ್ಟೆ ಸಹಿತ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರೆ ಪಾಣೆಮಂಗಳೂರಿನ ಆಲಡ್ಕದಲ್ಲಿ ಮಾಮೂಲಿಯಂತೆ ಸುಮಾರು ಹದಿನೈದು ಮನೆಗಳು ಜಲಾವೃತಗೊಂಡಿದೆ.
ಬಂಟ್ವಾಳ ಸಮೀಪದ ಜಕ್ರಿಬೆಟ್ಟುವಿನ ಕೊಟ್ರಕಣಿ,ಕಂಚಿಕಾರ ಪೇಟೆ, ಬಸ್ತಿಪಡ್ಪುವಿಲ್ಲಿ ರಸ್ತೆಯನ್ನು ನೀರು ಅವರಿಸಿದ ಹಿನ್ನಲೆಯಲ್ಲಿ ಈ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿತ್ತು.
ಬಂಟ್ವಾಳ ಬಡ್ಡಕಟ್ಟೆಯ ಬಸ್ ತಂಗುದಾಣವು ಜಲಾವೃತಗೊಂಡರೆ, ಇಲ್ಲಿರುವ ಪುರಸಭೆಯ ಎರಡು ವಾಣಿಜ್ಯಸಂಕಿರ್ಣದಲ್ಲಿ ತಳಭಾಗದ ಎಲ್ಲಾ ಹೊಟೇಲ್, ಅಂಗಡಿಗಳಿಗೆ ನೀರು ನುಗ್ಗಿದೆ. ಬ್ರಹ್ಮರಕೊಟ್ಲು,ಆರ್ಕುಳ,ಸರಪಾಡಿ,ಸಜೀಪ ಮೊದಲಾದ ತಗ್ಗುಪ್ರದೇಶದಲ್ಲಿ ಜಲಾವೃತಗೊಂಡಿದ್ದು,ತೋಟ,ಗದ್ದೆಯಲ್ಲಿ ನೀರು ನಿಲುಗಡೆಯಾಗಿದೆ.
ಬಂಟ್ವಾಳ ಮೂಡೂರು- ಪಡೂರು ಜೋಡುಕರೆ ನಡೆಯುವ ಕೂಡಿಬೈಲು ಕಂಬಳ ಗದ್ದೆ ನದಿಯಂತೆ ನೀರು ನಿಂತು ಸಂಪೂರ್ಣ ಜಲಾವೃತ ಗೊಂಡ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಅಜಿಲಮೊಗರು ಮಸೀದಿ ಸುತ್ತ ಜಲಾವೃತಗೊಂಡಿದೆ.ಅತ್ತ ಕಡೇಶ್ವಾಲ್ಯ ದೇವಳದ ಅವರಣಕ್ಕು ನೀರು ನುಗ್ಗಿದೆ.
ಜಕ್ರಬೆಟ್ಟು ಸೇತುವೆ ಮತ್ರು ಅಣೆಕಟ್ಟಿನ ಹಾಗೂ ತುಂಬೆ ಡ್ಯಾಂನ ಎಲ್ಲಾ ಗೇಟ್ ಗಳನ್ನು ತೆರೆಯಲಾಗಿದೆ. ಸರಪಾಡಿ ಎಂಆರ್ ಪಿಎಲ್ ,ಶಂಭೂರು ,ತುಂಬೆ ಡ್ಯಾಂಗಳ ಎಲ್ಲಾ ಗೇಟ್ ತೆರದು ಆಗಾಗ ಹೆಚ್ಚುವರಿ ನೀರನ್ನು ಕೆಳಗಡೆ ಹರಿಯಬಿಡಲಾಗುತಿತ್ತು.
ಮುಳುಗಡೆ ಭೀತಿಯಲ್ಲಿದ್ದ ಮನೆಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.ತಾಲೂಕಾಡಳಿತ, ಪುರಸಭೆ ಸರ್ವಸನ್ನದ್ದವಾಗಿದ್ದು, ಸಂಭವಿಸಬಹುದಾದ ಯಾವುದೇ ಅಪಾಯವನ್ನು ಎದುರಿಸಲು ಸಜ್ಜಾಗಿದೆ.