ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಭೂಕುಸಿತ ಸಂಭವಿಸಿದ ನಂತರ 115ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ.
ಸಂಜೆ 6 ಗಂಟೆ ವೇಳೆ 115ಕ್ಕೂ ಅಧಿಕ ಶವ ಸಿಕ್ಕಿದೆ ಎನ್ನುವ ಮಾಹಿತಿ ಲಭಿಸಿದೆ. 128 ಮಂದಿ ಗಾಯಗೊಂಡಿದ್ದು, ಗುಡ್ಡ ಪ್ರದೇಶಗಳಲ್ಲಿ ಇನ್ನೂ ನೂರಾರು ಮಂದಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಎನ್‌ಡಿಆರ್‌ಎಫ್ ಮತ್ತು ಸೇನೆ ಸೇರಿದಂತೆ ಹಲವು ಏಜೆನ್ಸಿಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ಮೆಪ್ಪಾಡಿ ಆರೋಗ್ಯ ಕೇಂದ್ರದಲ್ಲಿ 42 ಸಾವು ದೃಢವಾಗಿದ್ದರೆ. ವಿಮ್ಸ್ ಆಸ್ಪತ್ರೆ 3, ಬತ್ತೇರಿ ತಾಲೂಕು ಆಸ್ಪತ್ರೆ 1, ನಿಲಂಬೂರ್ ಜಿಲ್ಲಾಸ್ಪತ್ರೆಯಲ್ಲಿ 41 ಮೃತದೇಹಗಳಿದ್ದು 16 ದೇಹದ ಭಾಗಗಳಿವೆ. 120ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ 83 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೆಪ್ಪಾಡಿಯಲ್ಲಿ 27, ಕಲ್ಪೆಟ್ಟಾ ಜನರಲ್ ಆಸ್ಪತ್ರೆಯಲ್ಲಿ 13 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ 98 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, 20 ಮೃತದೇಹಗಳ ಮರಣೋತ್ತರ ಪರೀಕ್ಷೆ ಮುಗಿದಿದೆ ಎನ್ನುವ ಮಾಹಿತಿ ಬಂದಿದೆ. ಉಳಿದಂತೆ ಸ್ಥಳೀಯ ಆಸ್ಪತ್ರೆಗಳು ಶವದಿಂದ ಸಂಪೂರ್ಣವಾಗಿ ಭರ್ತಿಯಾಗಿದ್ದು, ಶವಗಳನ್ನು ಇಡಲು ಆಸ್ಪತ್ರೆಯ ಎದುರುಗಡೆಯೇ ಶಾಮಿಯಾನ ಹಾಕಲಾಗಿದೆ.
ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಸೇರಿವೆ. ಚಾಲಿಯಾರ್ ನದಿಯಲ್ಲಿ ಹಲವರು ಕೊಚ್ಚಿಹೋಗಿರುವ ಬಗ್ಗೆ ಈಗಾಗಲೇ ಆತಂಕವಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇದೊಂದು ಹೃದಯ ವಿದ್ರಾವಕ ದುರಂತ ಎಂದು ಬಣ್ಣಿಸಿದ್ದು, ಇಡೀ ಪ್ರದೇಶವೇ ನಾಶವಾಗಿದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ ಎರಡು ದಿನಗಳ ಶೋಕಾಚರಣೆಯನ್ನೂ ಘೋಷಿಸಿದೆ.