ಬಂಟ್ವಾಳದ ದಿಗಂತ್ ನಾಪತ್ತೆ ಕೇಸ್: ಪೊಲೀಸರಿಗೆ ಖಡಕ್ ಸೂಚನೆ ಕೊಟ್ಟ ಹೈಕೋರ್ಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿದ್ದು, ಹಲವು ದಿನಗಳ ಹುಡುಕಾಟ ನಡೆಸಿದರೂ ಸುಳಿವು ಸಿಗದ ಕಾರಣ, ಅವರ ಪೋಷಕರು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.

ಇದೀಗ ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್, ಪೊಲೀಸರಿಗೆ ತನಿಖೆ ನಡೆಸಿ ಮಾರ್ಚ್ 12ರೊಳಗೆ ವರದಿ ಸಲ್ಲಿಸುವಂತೆ ಆದೇಶಿಸಿದೆ.

ದಿಗಂತ್ ನಾಪತ್ತೆಯಾಗಿ 10 ದಿನವಾದರೂ ವಿದ್ಯಾರ್ಥಿಯ ಸುಳಿವು ಸಿಕ್ಕಿಲ್ಲ. ಹೀಗಾಗಿ ವಿದ್ಯಾರ್ಥಿ ದಿಗಂತ್ ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದರು. ಮಗನನ್ನು ಪತ್ತೆ ಮಾಡಿಕೊಡಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ದಿಗಂತ್ ತಂದೆ ಪದ್ಮನಾಭ್ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಜಸ್ಟೀಸ್ ವಿ.ಕಾಮೇಶ್ವರ್ ರಾವ್, ಜಸ್ಟೀಸ್ ಟಿ.ಎಂ ನಡಾಫ್​​ರಿಂದ ಹೈಕೋರ್ಟ್​ ದ್ವಿಸದಸ್ಯ ವಿಭಾಗೀಯ ಪೀಠದಲ್ಲಿ ಅರ್ಜಿಯ ವಿಚಾರಣೆ ಮಾಡಲಾಗಿದ್ದು, ಮಾರ್ಚ್ 12 ರ ಒಳಗೆ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸರಿಗೆ ಆದೇಶಿಸಲಾಗಿದೆ. ಮಾರ್ಚ್ 13ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಫೆ.25ರ‌ ಸಂಜೆಯಿಂದ ದಿಗಂತ್, ನಾಪತ್ತೆಯಾಗಿದ್ದ. ಫರಂಗಿಪೇಟೆ ಆಂಜನೇಯ ವ್ಯಾಯಾಮ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ದಿಗಂತ್, ದೇವಸ್ಥಾನಕ್ಕೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದ.

ಬಳಿಕ ಫರಂಗಿಪೇಟೆಯಲ್ಲಿ ರೈಲ್ವೆ ಹಳಿಯಲ್ಲಿ ದಿಗಂತ್ ಚಪ್ಪಲಿ ಹಾಗೂ ಮೊಬೈಲ್ ಪತ್ತೆಯಾಗಿತ್ತು. ಒಂದು ಚಪ್ಪಲಿಯಲ್ಲಿ ರಕ್ತದ ಕಲೆ ಕಂಡುಬಂದಿತ್ತು. ಸದ್ಯ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ನಾಪತ್ತೆಯಾದ ಸಂದರ್ಭ ಪೊಲೀಸರು ದೂರು ಸ್ವೀಕರಿಸಿ ತಕ್ಷಣವೇ ಕ್ರಮಕೈಗೊಳ್ಳದ ಬಗ್ಗೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆರಂಭದಲ್ಲೇ ಸರಿಯಾದ ನಿಟ್ಟಿನಲ್ಲಿ ತನಿಖೆ ಆರಂಭಿಸದ ಪೊಲೀಸರು ದಿಗಂತ್ ಪತ್ತೆಗೆ ಅವಕಾಶ ಇದ್ದ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದಾರೆ. ಮಾರ್ಚ್ 1 ರಂದು ಫರಂಗಿಪೇಟೆ ಬಂದ್ ಮಾಡಿದ ಬಳಿಕ ಏಳು ತನಿಖಾ ತಂಡಗಳನ್ನು ರಚಿಸಿ ತನಿಖೆಯನ್ನು ಆರಂಭಿಸಿದ್ದಾಗಿ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಪೊಲೀಸರು ಈ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಹಿಂದೂಪರ ಸಂಘಟನೆ ವಿ.ಎಚ್.ಪಿ, ಬಜರಂಗದಳ, ಬಿಜೆಪಿ ಇತ್ತೀಚೆಗೆ ಫರಂಗಿಪೇಟೆ ಬಂದ್ ನಡೆಸಿ ಪೊಲೀಸ್ ಇಲಾಖೆ ವಿರುದ್ದ ಪ್ರತಿಭಟಿನೆ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!