ಹೊಸದಿಗಂತ ವರದಿ,ಶ್ರೀರಂಗಟಪ್ಟಣ :
ಹಾಡುಹಗಲೇ ಪೊಲೀಸ್ ಠಾಣೆ ಮುಂಭಾಗದ 200 ರಿಂದ 300 ಮೀಟರ್ ಹಂತರದಲ್ಲೇ ಪುಡಿರೌಡಿಗಳು ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೆಆರ್‌ಎಸ್‌ನಲ್ಲಿ ನಡೆದಿದೆ.
ಕೆಆರ್‌ಎಸ್‌ನ ಪೊಲೀಸ್ ಠಾಣಾ ಸಮೀಪದ ಸಂತೆ ಮೈದಾನದಲ್ಲಿ ಗುರುವಾರ ಸಂಜೆ ಘಟನೆ ನಡೆದಿದ್ದು, ಮೂಲತಃ ಕೆಆರ್‌ನಗರ ತಾಲೂಕಿನ ಬಸವರಾಜಪುರ ಗ್ರಾಮದ ರೇವಣ್ಣ ರವರ ಮಗ ಚೇತನ್ (40) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ.
ಸುಮಾರು 10ವರ್ಷಗಳ ಹಿಂದೆ ಬಾರೆಆನಂದೂರು ಗ್ರಾಮದ ಯುವತಿಯೊಂದಿಗೆ ವಿವಾಹವಾಗಿದ್ದು, 7ರಿಂದ 8ವರ್ಷದ ಗಂಡು ಮಗು ಇದ್ದು, ಈತ ಹಲವು ವರ್ಷಗಳಿಂದ ಕೆಆರ್‌ಎಸ್‌ನಲ್ಲಿ ಬೇಕರಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನೆ ವಿವರ : ಬೈಕ್‌ನಲ್ಲಿ ಬಂದ ಮೂರ್ನಾಲ್ಕು ಮಂದಿಯ ಪುಡಿ ರೌಡಿಗಳ ತಂಡ ಮೊದಲಿಗೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕರನ್ನ ಹೆದರಿಸಿ, ಬೇಕರಿ ಮುಂಭಾಗದಲ್ಲಿದ್ದ ವಸ್ತುಗಳಬ್ಬ ಒಡೆದು, ರಸ್ತೆಗೆ ಚೆಲ್ಲಿದ್ದಾರೆ. ಅಷ್ಟರಲ್ಲಿ ಮೂತ್ರ ವಿಷರ್ಜನೆಗೆ ತೆರಳಿದ್ದ ಚೇತನ್ ಬೇಕರಿ ಬಳಿ ಬರುತ್ತಿದ್ದಂತೆ ಏಕಾಏಕಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ, ಪ್ರಜ್ಞೆ ತಪ್ಪಿದ್ದು ಅಕ್ಕ-ಪಕ್ಕದ ಅಂಗಡಿಯವರು ಹಾಗೂ ಸ್ಥಳಿಯರು ಸಂತೈಸಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮದ್ಯೆ ಕೊನೆಯುಸಿರೆಳೆದಿದ್ದಾನೆ. ಈ ಸಂಬಂದ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯರ ಆಕ್ರೋಶ : ಹಾಡುಹಗಲೇ ಪೊಲೀಸ್ ಠಾಣಾ ಕೂಗಳತೆ ದೂರದಲ್ಲೇ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ನಡೆದಿದ್ದು ಸಾಮಾನ್ಯ ಜನರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ. ಕೆಆರ್‌ಎಸ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೌಡಿ ಹಾಗೂ ಪುಡಿರೌಡಿಗಳು ಹೆಚ್ಚಾಗಿದ್ದಾರೆ. ಇದನ್ನ ತಡೆಯುವಲ್ಲಿ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು ರೌಡಿಶೀಟರ್‌ಗಳೊಂದಿಗೆ ಸಭೆ, ಸಮಾರಂಭಗಳಲ್ಲಿ ಭಾಗಿಯಾಗಿ ಫೋಟೋ ತೆಗೆಸಿಕೊಳ್ಳುತ್ತಿರುವುದು ರೌಡಿಗಳನ್ನ ಹತೋಟಿಗೆ ತರುವಲ್ಲಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.