ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಕೇಂದ್ರ ಶಿಸ್ತು ಸಮಿತಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉತ್ತರ ನೀಡಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರರನ್ನು ಬದಲಿಸಬೇಕು ಎಂದು ಸಮರ ಸಾರಿ, ಭಿನ್ನಮತೀಯರ ಗುಂಪು ಕಟ್ಕೊಂಡು ದೆಹಲಿ ಯಾತ್ರೆ ಮಾಡಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಹೈಕಮಾಂಡ್ ಶಾಕ್ ಕೊಟ್ಟಿತ್ತು. ಕೇಂದ್ರ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿ 72 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಿತ್ತು. ಅದರಂತೆ ಯತ್ನಾಳ್ 12 ಪುಟಗಳಲ್ಲಿ ಸುದೀರ್ಘ ಉತ್ತರ ನೀಡಿದ್ದಾರೆ.
ಉತ್ತರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಹಾಗೂ ಯಡಿಯೂರಪ್ಪ ವಿರುದ್ಧ ಸಾಲು ಸಾಲು ದೂರು ನೀಡಿದ್ದಾರೆ. ತಮ್ಮ ವಿರುದ್ಧ ನೋಟಿಸ್ ನೀಡಿರುವುದಕ್ಕೆ ಯತ್ನಾಳ್ ತೀವ್ರ ಬೇಸರಗೊಂಡಿದ್ದಾರೆ.
ನಾನು ಏನು ಮಾಡಿದ್ದೀನಿ ಅಂತಾ ನೋಟೀಸ್ ಕೊಟ್ಟಿದ್ದೀರಿ? ಇದು ವಿಜಯೇಂದ್ರ, ಯಡಿಯೂರಪ್ಪ ಪ್ರಭಾವ ಪ್ರೇರಿದ ನೋಟಿಸ್ ಆಗಿದೆ. ಪಕ್ಷ ವಿರೋಧಿಗಳಿಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ಶಿವರಾಮ್ ಹೆಬ್ಬಾರ್, ಎಸ್ ಟಿ ಸೋಮಶೇಖರ್ ರಂತವರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ರು ಸುಮ್ಮನೆ ಇದ್ದೀರಿ, ಆದರೆ ಪಕ್ಷಕ್ಕಾಗಿ ದುಡಿಯುತ್ತಿರುವರಿಗೆ ನೋಟಿಸ್ ಕೊಟ್ಟಿದ್ದೀರಿ ಎಂದು ಬೇಸರ ಹೊರಹಾಕಿದ್ದಾರೆ.
ಪಕ್ಷವನ್ನು ಸೋಲಿಸಿದವರಿಗೆ, ಬಲಿ ಕೊಟ್ಟವರಿಗೆ ಯಾವುದೇ ರೀತಿಯ ಕ್ರಮ ಇಲ್ಲ. ವಿಧಾನಸಭೆ ಚುನಾವಣೆ ಸೋಲಿಗೆ, ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಕ್ಷೇತ್ರಗಳಲ್ಲಿ ಸೋಲಿಗೆ ಕಾರಣರಾದವರಿಗೆ ನೋಟಿಸ್ ಇಲ್ಲ. ಪಕ್ಷದಲ್ಲಿನ ಹಿರಿಯರ ಕಡೆಗಣನೆ ಮಾಡಿದವರಿಗೆ ನೋಟಿಸ್ ಇಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟದಲ್ಲಿ ಪಕ್ಷ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಜಿಲ್ಲಾಧ್ಯಕ್ಷರುಗಳ ಆಯ್ಕೆಯಲ್ಲೂ ಹಿರಿಯರನ್ನು ವಿಶ್ವಾಸಕ್ಕೆ ತಗೊಂಡಿಲ್ಲ. ಪಕ್ಷಕ್ಕಾಗಿ ದುಡಿದವರು, ಹಿರಿಯರ ಪರಿಸ್ಥಿತಿ ಏನು.? ಇವಾಗಿನ ಅಧ್ಯಕ್ಷರು ಹಿರಿಯರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಇವಾಗ ಪಕ್ಷದಲ್ಲಿ ವಿಜಯೇಂದ್ರ ಜೊತೆ ಎಷ್ಟು ಜನರಿದ್ದಾರೆ? ನೀವು ಒಮ್ಮೆ ರಾಜ್ಯಕ್ಕೆ ಬಂದು ನಾಯಕರ ಅಭಿಪ್ರಾಯ ಕೇಳಿ.. ಜಿಲ್ಲಾಧ್ಯಕ್ಷರುಗಳ ನೇಮಕ ಕೂಡ ಅವರಿಗೆ ಬೇಕಾದವರನ್ನು ಮಾಡಿಕೊಂಡಿದ್ದಾರೆ. ಯಡಿಯೂರಪ್ಪಗೆ ಪುತ್ರನ ಮೇಲೆ ವ್ಯಾಮೋಹ ಅಷ್ಟೇ, ಪಕ್ಷದ ಮೇಲೆ ಯಾವುದೇ ಕಾಳಜಿ ಇಲ್ಲ. ಈ ಹಿಂದೆ ಅವರು ಹೋರಾಟ ಮಾಡಿ ಪಕ್ಷ ಕಟ್ಟಿದ್ದಾರೆ, ಅಧಿಕಾರಕ್ಕೆ ತಂದಿದ್ದಾರೆ ನಿಜ, ಆದರೆ ಇವಾಗ ಅವರ ಮಗನನ್ನೇ ಅಧ್ಯಕ್ಷರಾಗಿ ಮಾಡಿದ್ದಾರೆ. ಅವರು ಬಿಟ್ಟು ಪಕ್ಷದಲ್ಲಿ ಬೇರೆ ಯಾರು ಇರಲಿಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ.
ನಾನು ಪಕ್ಷದ ವಿರುದ್ಧವಾಗಿ ಮಾತಾಡಿಲ್ಲ, ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಮುಂದೆಯೂ ಮಾಡೋದಿಲ್ಲ. ನನ್ನ ಹೋರಾಟ ಏನಿದ್ದರೂ ಭ್ರಷ್ಟಾಚಾರ, ಕುಟುಂಬ ರಾಜಕಾರಣದ ವಿರುದ್ಧ ಅಷ್ಟೇ. ಇದನ್ನೇ ನೀವು ಪಕ್ಷ ವಿರೋಧಿ ನಿಲುವು ಅಂತಾ ಹೇಗೆ ಭಾವಿಸುತ್ತೀರಿ? ಎಂದು ಹೈಕಮಾಂಡ್ ಕೊಟ್ಟ ನೋಟೀಸ್‌ಗೆ ವಿವರವಾದ ಪತ್ರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.