ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿಸಿಐ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಭಾರತ ತಂಡದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಅವರನ್ನು ನೇಮಕ ಮಾಡಲಾಗಿದೆ.
ಕ್ರಿಕೆಟ್ ಸಲಹಾ ಸಮಿತಿಯ (ಸಿಎಸಿ) ಶಿಫಾರಸಿನ ಮೇರೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಮಂಗಳವಾರ ಈ ವಿಷಯವನ್ನು ಘೋಷಿಸಿದ್ದಾರೆ.
ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಪುರುಷರ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕಾಗಿ ಅರ್ಜಿಗಳನ್ನು ಪರಿಶೀಲಿಸಿ ಸಂದರ್ಶನ ನಡೆಸಿತು. ನಂತರ ಸರ್ವಾನುಮತದಿಂದ ಅಜಿತ್ ಅಗರ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಯ್ ಶಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಗರ್ಕರ್ ಭಾರತ ತಂಡದ ಪರವಾಗಿ 26 ಟೆಸ್ಟ್, 191 ಏಕದಿನ ಮತ್ತು 4 ಟಿ20 ಪಂದ್ಯಗಳನ್ನು ಆಡಿದ್ದಾರೆ. 1999, 2003 ಮತ್ತು 2007ರ ಏಕದಿನ ವಿಶ್ವಕಪ್ ತಂಡದ ಭಾಗವಾಗಿದ್ದರು. 2007ರ ಟಿ20 ವಿಶ್ವಕಪ್ ವಿಜೇತ ತಂಡದಲ್ಲೂ ಪಾಲ್ಗೊಂಡಿದ್ದರು.
ಪ್ರಧಾನ ಆಯ್ಕೆಗಾರರಾಗಿ ನೇಮಕವಾಗಿರುವ ಅಜಿತ್ ಅಗರ್ಕರ್ ಉತ್ತಮ ಸಂಬಳ ಪಡೆಯಲಿದ್ದಾರೆ. ಸುಮಾರು 1 ಕೋಟಿ ರೂಪಾಯಿ ವೇತನ ಪಡೆಯಲಿದ್ದಾರೆ., ಸಮಿತಿಯ ಉಳಿದ ಸದಸ್ಯರು ತಲಾ 90 ಲಕ್ಷ ರೂಪಾಯಿ ವೇತನ ಪಡೆಯಲಿದ್ದಾರೆ.