October 18, 2026
Sunday, October 18, 2026
spot_img

Be Aware | ಸೊಂಟ ನೋವು ಅಂತ ನಿರ್ಲಕ್ಷಿಸಬೇಡಿ: ಅದು ಕಿಡ್ನಿ ಸಮಸ್ಯೆಯೂ ಆಗಿರಬಹುದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೈನಂದಿನ ಜೀವನದಲ್ಲಿ ಬೆನ್ನು ನೋವು ಎನ್ನುವುದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ, ಅನೇಕ ಬಾರಿ ಜನರು ಬೆನ್ನು ನೋವು ಮತ್ತು ಮೂತ್ರಪಿಂಡದ (ಕಿಡ್ನಿ) ನೋವಿನ ನಡುವೆ ಗೊಂದಲಕ್ಕೊಳಗಾಗುತ್ತಾರೆ. ಕಿಡ್ನಿ ನೋವನ್ನು ಬೆನ್ನು ನೋವೆಂದು ಭಾವಿಸಿ ನಿರ್ಲಕ್ಷಿಸುವುದು ಅಪಾಯಕ್ಕೆ ದಾರಿ ಮಾಡಿಕೊಡಬಹುದು. ಹಾಗಾದರೆ ಇವೆರಡರ ನಡುವಿನ ವ್ಯತ್ಯಾಸವೇನು? ವೈದ್ಯರನ್ನು ಯಾವಾಗ ಕಾಣಬೇಕು? ಇಲ್ಲಿದೆ ಸಂಪೂರ್ಣ ವಿವರ.

ನೋವು ಕಾಣಿಸಿಕೊಳ್ಳುವ ಜಾಗ

ಬೆನ್ನು ನೋವು: ಇದು ಸಾಮಾನ್ಯವಾಗಿ ಬೆನ್ನಿನ ಕೆಳಭಾಗದಲ್ಲಿ ಅಥವಾ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಬೆನ್ನುಮೂಳೆ ಅಥವಾ ಮಾಂಸಖಂಡಗಳಿಗೆ ಸಂಬಂಧಿಸಿರುತ್ತದೆ.

ಕಿಡ್ನಿ ನೋವು: ಕಿಡ್ನಿಗಳು ಪಕ್ಕೆಲಬುಗಳ ಕೆಳಗೆ, ಬೆನ್ನಿನ ಹಿಂಭಾಗದಲ್ಲಿರುತ್ತವೆ. ಹೀಗಾಗಿ ಕಿಡ್ನಿ ನೋವು ಪಕ್ಕೆಲಬುಗಳ ಕೆಳಗೆ, ಹೊಟ್ಟೆಯ ಪಕ್ಕದಲ್ಲಿ ಅಥವಾ ಬೆನ್ನಿನ ಮಧ್ಯಭಾಗದ ಆಳದಲ್ಲಿ ಅನುಭವಕ್ಕೆ ಬರುತ್ತದೆ. ಇದು ದೇಹದ ಒಂದು ಬದಿಯಲ್ಲಿ ಅಥವಾ ಎರಡೂ ಬದಿಯಲ್ಲಿ ಬರಬಹುದು.

ನೋವಿನ ಲಕ್ಷಣ

ಬೆನ್ನು ನೋವು: ಇದು ನಿಂತಾಗ, ಬಗ್ಗಿದಾಗ ಅಥವಾ ಭಾರ ಎತ್ತಿದಾಗ ಹೆಚ್ಚಾಗುತ್ತದೆ. ವಿಶ್ರಾಂತಿ ಪಡೆದರೆ ಅಥವಾ ಮಲಗಿದರೆ ಕೊಂಚ ಶಮನವಾಗುತ್ತದೆ. ಇದು ಹೆಚ್ಚಾಗಿ ಮಾಂಸಖಂಡಗಳ ಸೆಳೆತದಂತೆ ಅನುಭವವಾಗುತ್ತದೆ.

ಕಿಡ್ನಿ ನೋವು: ಇದು ಸುಲಭವಾಗಿ ಕಡಿಮೆಯಾಗುವುದಿಲ್ಲ. ನೀವು ಕುಳಿತರೂ, ಮಲಗಿದರೂ ನೋವು ತೀವ್ರವಾಗಿಯೇ ಇರುತ್ತದೆ. ಇದು ತೀಕ್ಷ್ಣವಾದ, ಆಳವಾದ ಮತ್ತು ಬಂದು ಹೋಗುವ ನೋವಾಗಿರುತ್ತದೆ.

ಇತರ ಲಕ್ಷಣಗಳು

ಬೆನ್ನು ನೋವಿನಲ್ಲಿ: ನೋವಿರುವ ಜಾಗದಲ್ಲಿ ಉರಿ, ಮಾಂಸಖಂಡಗಳ ಜಡತ್ವ ಮತ್ತು ಚಲಿಸಲು ಕಷ್ಟವಾಗುವುದು ಮುಖ್ಯ ಲಕ್ಷಣ.

ಕಿಡ್ನಿ ನೋವಿನಲ್ಲಿ: ಮೂತ್ರ ವಿಸರ್ಜನೆ ಮಾಡುವಾಗ ಉರಿ ಅಥವಾ ನೋವು, ಮೂತ್ರದ ಬಣ್ಣ ಬದಲಾಗುವುದು, ಪದೇ ಪದೇ ಮೂತ್ರ ಬರುವುದು, ಜ್ವರ, ಚಳಿ, ವಾಂತಿ ಅಥವಾ ವಾಕರಿಕೆ ಕಂಡುಬರುತ್ತದೆ.

ವೈದ್ಯರನ್ನು ಯಾವಾಗ ಭೇಟಿಯಾಗಬೇಕು?

ನೋವಿನ ಜೊತೆಗೆ ಜ್ವರ, ವಾಂತಿ, ಮೂತ್ರದಲ್ಲಿ ರಕ್ತ ಅಥವಾ ತೀವ್ರ ಉರಿ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಯಾವುದೇ ಕಾರಣಕ್ಕೂ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬೇಡಿ.

ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಮಾಡಿಕೊಳ್ಳುವುದು ನಿಮ್ಮ ಆರೋಗ್ಯವನ್ನು ಸುರಕ್ಷಿತವಾಗಿಡಲು ಅತ್ಯಂತ ಅಗತ್ಯ.

Must Read