Friday, June 2, 2023

Latest Posts

ಏ.1ರಿಂದ ಜಾರಿಯಾಗಲಿರೋ ಈ ತೆರಿಗೆ ನಿಯಮಗಳ ಬಗ್ಗೆ ನಿಮಗೆ ತಿಳಿದಿರಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಾರ್ಚ 31ಕ್ಕೆ 2022-23ನೇ ಆರ್ಥಿಕ ವರ್ಷವು ಮುಕ್ತಾಯವಾಗಿ ಏಪ್ರಿಲ್‌ 1ರಿಂದ 2023-24ನೇ ಆರ್ಥಿಕ ವರ್ಷವು ಜಾರಿಯಾಗಲಿದೆ. ಹೊಸ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಸ್ಲ್ಯಾಬ್ ಗಳಲ್ಲಿ ಬದಲಾವಣೆ, ತೆರಿಗೆ ರಿಯಾಯಿತಿ ಮಿತಿ ಹೆಚ್ಚಳ ಸೇರಿದಂತೆ ಕೆಲ ಹೊಸ ತೆರಿಗೆ ನಿಯಮಗಳು ಜಾರಿಗೆ ಬರಲಿದ್ದು ಈ ಬದಲಾವಣೆಗಳ ಕುರಿತು ನೀವು ತಿಳಿದಿರಬೇಕಾದ ಮಾಹಿತಿ ಇಲ್ಲಿದೆ.

  • ಡೀಫಾಲ್ಟ್‌ ಆಗಲಿದೆ ಹೊಸ ಆದಾಯ ತೆರಿಗೆ ಪದ್ಧತಿ: ಈ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದಂತೆ ಹೊಸ ಆದಾಯ ತೆರಿಗೆ ಪದ್ಧತಿಯು ಡೀಫಾಲ್ಡ್‌ ತೆರಿಗೆ ಪದ್ಧತಿಯಾಗಿ ಬದಲಾಗಲಿದ್ದು ಆದಾಗ್ಯೂ ತೆರಿಗೆ ಪಾವತಿದಾರರು ಹಳೆಯ ಪದ್ಧತಿಯಲ್ಲಿಯೇ ತೆರಿಗೆ ಪಾವತಿಸುವ ಆಯ್ಕೆ ಹೊಂದಿರುತ್ತಾರೆ.
  • ತೆರಿಗೆ ವಿನಾಯಿತಿ ಮಿತಿ ಏರಿಕೆ: ಆದಾಯ ತೆರಿಗೆಯಲ್ಲಿ ವಿನಾಯಿತಿ ಪಡೆಯುವ ಮಿತಿಯು 7 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಲಿದೆ. ಈ ಹಿಂದೆ 5 ಲಕ್ಷ ರೂಪಾಯಿ ಆದಾಯದ ವರೆಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಈ ವರ್ಷದ ಬಜೆಟ್‌ ನಲ್ಲಿ ವಿತ್ತ ಸಚಿವರು ವಿನಾಯಿತಿ ಮಿತಿಯನ್ನು ಏರಿಕೆ ಮಾಡುತ್ತಿರುವುದಾಗಿ ಘೋಷಿಸಿದ್ದರು. ಇದರ ಅನ್ವಯ 7 ಲಕ್ಷದ ವರೆಗೆ ಆದಾಯ ಹೊಂದಿರುವವರು ತೆರಿಗೆ ವಿನಾಯಿತಿ ಪಡೆಯಲಿದ್ದಾರೆ.
  • ಪ್ರಮಾಣಿತ ಕಡಿತ (Standard Deduction): ಹೊಸ ತೆರಿಗೆ ಪದ್ಧತಿಯನ್ನು ಬಳಸುವ ಪಿಂಚಣಿದಾರರು,  15.5 ಲಕ್ಷ ರೂ. ಆದಾಯ ಹೊಂದಿರುವವರು ನ್ಯೂ ಟ್ಯಾಕ್ಸ್‌ ರೆಜಿಂ ಅಡಿಯಲ್ಲಿ 52,500 ರೂ. ಪ್ರಮಾಣಿತ ಕಡಿತದ ಪ್ರಯೋಜನ ಪಡೆಯಲಿದ್ದಾರೆ. ಹಳೆಯ ತೆರಿಗೆ ಪದ್ಧತಿ ಅನುಸರಿಸುವವರಿಗೆ 50 ಸಾವಿರ ರೂ. ತೆರಿಗೆ ವಿನಾಯಿತಿ ನೀಡಲಾಗಿದ್ದು ಇದರಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.
  • ಆದಾಯ ತೆರಿಗೆ ಸ್ಲ್ಯಾಬ್‌ ಗಳಲ್ಲಿ ಬದಲಾವಣೆ: ಬದಲಾವಣೆಗೊಂಡ ಆದಾಯ ತೆರಿಗೆ ಪಾವತಿ ಸ್ಲ್ಯಾಬ್‌ಗಳು ಅನ್ವಯವಾಗಲಿದ್ದು ಅದರ ಅನ್ವಯ ನೂತನ ತೆರಿಗೆ ದರಗಳು ಹೀಗಿವೆ

0-3 ಲಕ್ಷ – ಶೂನ್ಯ

3-6 ಲಕ್ಷ – 5%

6-9 ಲಕ್ಷ- 10%

9-12 ಲಕ್ಷ – 15%

12-15 ಲಕ್ಷ – 20%

15 ಲಕ್ಷಕ್ಕಿಂತ ಹೆಚ್ಚು- 30%

  • ಈ ಮ್ಯೂಚುವಲ್‌ ಫಂಡ್‌ ಹೂಡಿಕೆಗಳ ಮೇಲೆ ತೆರಿಗೆ: ಏಪ್ರಿಲ್ 1 ರಿಂದ, ಸಾಲದಲ್ಲಿರುವ ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆಗಳ ಮೇಲೆ ಅಲ್ಪಾವಧಿ ಬಂಡವಾಳ ಲಾಭದ ತೆರಿಗೆ ವಿಧಿಸಲಾಗುತ್ತದೆ. ಇಂತಹ ಹೂಡಿಕೆಗಳಿಗೆ LTCG ತೆರಿಗೆ ಪ್ರಯೋಜನವು ದೊರೆಯುವುದಿಲ್ಲ
  • ಈ ಜೀವ ವಿಮಾ ಪಾಲಿಸಿಗಳ ಮೇಲೆ ತೆರಿಗೆ: 5 ಲಕ್ಷ ರೂ. ವಾರ್ಷಿಕ ಪ್ರೀಮಿಯಂ ಹೊಂದಿರುವ ಅಥವಾ ಹೆಚ್ಚಿನ ಪ್ರಿಮಿಯಂ ಹೊಂದಿರುವ ಜೀವ ವಿಮೆಗಳಿಂದ ಬರುವ ಆದಾಯವು ಹೊಸ ಹಣಕಾಸು ವರ್ಷದಿಂದ ಅಂದರೆ 1ನೇ ಏಪ್ರಿಲ್ 2023 ರಿಂದ ತೆರಿಗೆಗೆ ಒಳಪಡಲಿದೆ. ಯುಲಿಪ್ (ಯುನಿಟ್ ಲಿಂಕ್ಡ್ ವಿಮಾ ಯೋಜನೆ) ಗಳಿಗೆ ಹೊಸ ಆದಾಯ ತೆರಿಗೆ ನಿಯಮವು ಅನ್ವಯವಾಗುವುದಿಲ್ಲ ಎಂದು ವಿತ್ತಸಚಿವರು ಬಜೆಟ್‌ ವೇಳೆ ಘೋಷಿಸಿದ್ದಾರೆ.
  • ಹಿರಿಯ ನಾಗರಿಕರಿಗೆ ಉಳಿತಾಯ ಮಿತಿ ಹೆಚ್ಚಳ: ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಗರಿಷ್ಠ ಠೇವಣಿ ಮಿತಿಯು 15 ಲಕ್ಷರೂ.ಗಳಿಂದ 30 ಲಕ್ಷ ರೂ.ಗಳಿಗೆ ಏರಿಕೆಯಾಗಲಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!