ಹೊಸದಿಗಂತ ವರದಿ, ಮಂಡ್ಯ:
ಬೆಳೆಯುತ್ತಿರುವ ಬೆಳೆಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವುದು, ಜಾನುವಾರುಗಳಿಗೆ ಮೇವು ಸಂಗ್ರಹ, ಕುಡಿಯುವ ನೀರು ಸಮರ್ಪಕ ಪೂರೈಕೆ, ಬರ ಪೀಡಿತ ಪ್ರದೇಶಗಳಲ್ಲಿ ಕರೆಕಟ್ಟೆಗಳು ಬತ್ತದ ಹಾಗೆ ನೋಡಿಕೊಳ್ಳುವುದು, ಪಡಿತರ ಸರಬರಾಜುವಿನಲ್ಲಿ ತೂಕ ವ್ಯತ್ಯಾಸ ಕಂಡು ಬರುತ್ತಿರುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕೆಡಿಪಿ ಸಭೆಯಲ್ಲಿ ಬೆಳಕು ಚೆಲ್ಲಿದರು.
ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಯಾ ತಾಲ್ಲೂಕಿನ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂದಿನ 202425ನೇ ವರ್ಷದ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕು. ಬರಗಾಲವನ್ನು ಸಮರ್ಪಕವಾಗಿ ಎದುರಿಸಬೇಕು. ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ಪಡೆದು ನಿಭಾಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಸೂಚಿಸಿದರು.
ಕಳೆದ ಹತ್ತು ವರ್ಷಗಳಲ್ಲಿಯೇ ಮಂಡ್ಯ ಜಿಲ್ಲೆಗೆ ಅತ್ಯಂತ ಕಡಿಮೆ ಮಳೆ ಬಿದ್ದಿದೆ. ಅದರಲ್ಲಿ 392 ಮಿ.ಮೀ. ರಷ್ಟು ಸರಾಸರಿಯಲ್ಲಿ ಕೇವಲ ಶೇ.22 ರಷ್ಟು ಮಳೆ ಕೊರತೆಯಾಗಿದೆ. ಇದು ಅತ್ಯಂತ ಕಡಿಮೆ ಮಳೆಯಾಗಿರುವುದು ದಾಖಲಾಗಿದೆ. ನಿರೀಕ್ಷೆಗೆ ಅನುಗುಣವಾಗಿ ಮಳೆಯಾಗಿಲ್ಲ, ಆಗಸ್ಟ್‌ನಲ್ಲಿ ಶೇ.28 ಮಿ.ಮೀ.ನಲ್ಲಿ ಶೇ.60 ರಷ್ಟು ಮಳೆ ಆಗಬೇಕಿತ್ತು, ಇದಕ್ಕ ಹೋಲಿಸಿದರೆ ಸೆಪ್ಟಂಬರ್ ತಿಂಗಳಿನಲ್ಲಿ ಮಳೆಯೇ ಆಗಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಹಾಗೆಯೇ ಮುಂದವರಿದಂತೆ, ಕೆ.ಆರ್.ಎಸ್. ನೀರಿನ ಮಟ್ಟ ಪ್ರಸ್ತುತದಲ್ಲಿ 99.64 ಅಡಿಯಿದೆ. ಇದರಲ್ಲಿ 18 ಟಿಎಂಸಿ ನೀರು ಬಳಕೆಗೆ ಸಿಗುತ್ತದೆ. ಜಿಲ್ಲೆಯಲ್ಲಿ ಕೆಲವು ರೈತರು ತಡವಾಗಿ ಬಿತ್ತನೆ ಮಾಡಿದ್ದಾರೆ, ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್ ಹಾಗೂ ನವೆಂಬರ್ ವೇಳೆಗೆ ನಾಲ್ಕು ಕಟ್ಟು ಪದ್ಧತಿಯಲ್ಲಿ ಬೆಳೆಗೆ ನೀರು ಹರಿಸಲಾಗಿದ್ದು, ಇಲ್ಲಿವರೆಗೆ 35 ಟಿಎಂಸಿ ನೀರು ಕೊಡಲಾಗಿದೆ. ನೀರಿನ ಅಭಾವ ಕಾಡುವುದರಿಂದ ಒಟ್ಟು 24 ಟಿಎಂಸಿ ನೀರು ಬೇಕಿದೆ, ಕೆಆರ್‌ಎಸ್‌ನಿಂದ 50 ಟಿಎಂಸಿ ಹಾಗೂ ಕಬಿನಿಯಿಂದ 50 ಟಿಎಂಸಿ ನೀರು ಕೊಟ್ಟರೆ, ಮೇ ತಿಂಗಳಿನವರೆಗೂ ನೀರು ಸಂಗ್ರಹಣೆ ಮಾಡಿಕೊಂಡರೆ ಸಾಕಾಗಬಹುದು ಎಂದು ಸಚಿವರಲ್ಲಿ ಮನವಿ ಮಾಡಿದರು.