ಹೊಸದಿಗಂತ ವರದಿ,ಕಲಬುರಗಿ:
ಆರೆಸ್ಸೆಸ್ ಮಟ್ಟ ಹಾಕುವುದಾಗಿ ಹಿಂದಿನ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಹಲವು ಬಾರಿ ಕಸರತ್ತು ನಡೆಸಿ,ಅನೇಕ ಬಾರಿ ಪ್ರಯತ್ನ ಪಟ್ಟರು.ಆದರೆ, ಆಗಲಿಲ್ಲ. ಹೀಗಾಗಿ ಆರೆಸ್ಸೆಸ್,ನ್ನು ಮಟ್ಟ ಹಾಕುವುದಾಗಲಿ, ಮುಗಿಸುವುದಾಗಿ ಯಾರಿಂದಲೂ ಸಾಧ್ಯವಿಲ್ಲ.ಅದನ್ನು ಮುಟ್ಟಿದರೆ ಸರ್ವನಾಶವಾಗುತ್ತಾರೆ ಎಂದು ವಿಪಕ್ಷ ನಾಯಕ,ಮಾಜಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಮಂಗಳವಾರ ನಗರದ ಐವನ್ ಇ ಶಾಹಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೆಸ್ಸೆಸ್ ಬ್ಯಾನ್ ಮಾಡುವುದು ಯಾರಿಂದಲೂ ಸಾಧ್ಯವಿಲ್ಲ.ಹಿಂದೊಮ್ಮೆ ಬ್ಯಾನ್ ಮಾಡಿ,ಅವರೇ ವಾಪಸ್ ಪಡೆದು ಗಣರಾಜ್ಯೋತ್ಸವ ದಿನದಂದು ಪಥಸಂಚಲನ ಮಾಡಿಸಿದರು.ದಮ್ಮು, ತಾಕತ್ತು ಇದ್ದರೆ ಮುಟ್ಟಿ ನೋಡಲಿ ಎಂದು ಸವಾಲು ಹಾಕಿದ ಅವರು, ಬ್ಯಾನ್ ಮಾಡುವ ಕನಸನ್ನು ಕಾಣುತ್ತಿರುವ ಕಾಂಗ್ರೆಸ್ ನವರು ಬಚ್ಚಾಗಳು ಎಂದು ಮಾರ್ಮಿಕವಾಗಿ ನುಡಿದರು.
ಕರ್ನಾಟಕದಲ್ಲಿ ಗೂಂಡಾಗಿರಿ ಸರ್ಕಾರ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಗುಂಡಾ ವರ್ತನೆ ಮಿತಿಮೀರಿದೆ. ಟಿಪ್ಪು ಸಂಸ್ಕೃತಿ ಜಾಸ್ತಿಯಾಗಿದೆ. ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ದಬ್ಬಾಳಿಕೆ, ಸುಳ್ಳು ದೂರುಗಳು ದಾಖಲು ಮಾಡುತ್ತಿದ್ದು, ಲೋಕಾಸಭಾ ಚುನಾವಣೆ ತನಕ ಈ ಸರ್ಕಾರ ತಾನಾಗಿಯೇ ಉರುಳಿ ಬಿಳಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಬಸವರಾಜ ಮತ್ತಿಮಡು, ಶರಣು ಸಲಗರ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್, ಗ್ರಾಮಾಂತರ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಸುನೀಲ್ ವಲ್ಯಾಪುರ್, ಸುಭಾಷ್ ಗುತ್ತೇದಾರ್, ಚಂದು ಪಾಟೀಲ್, ಹರ್ಷಾನಂದ ಗುತ್ತೇದಾರ್ ಇತರರು ಉಪಸ್ಥಿತರಿದ್ದರು.