Sunday, October 1, 2023

Latest Posts

ಕೊಡವ-ತುಳು ಭಾಷೆಗಳ ಮೇಲೂ ಇರಲಿ‌ ಕೇಂದ್ರದ ಪ್ರೀತಿ : ಬಿ.ಕೆ.ಹರಿಪ್ರಸಾದ್

ದಿಗಂತ ವರದಿ ಮಡಿಕೇರಿ:

ಅವನತಿಯ ಹಾದಿಯಲ್ಲಿರುವ ಕೊಡವ ಮತ್ತು ತುಳು ಭಾಷೆಯನ್ನು ಕೇಂದ್ರ ಸರ್ಕಾರ 8 ನೇ ಪರಿಚ್ಛೇದಕ್ಕೆ ಸೇರಿಸಬೇಕು, ರಾಜ್ಯ ಸರ್ಕಾರ ಈ ಭಾಷೆಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಂಸ್ಕೃತ ಭಾಷೆಯ ಮೇಲಿರುವ ಮಮತೆಯನ್ನು ಈ ಎರಡು ಭಾಷೆಗಳ ಮೇಲೂ ತೋರಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಹ್ರಹಿಸಿದರು.

ನಗರದ ಮಯೂರ ವ್ಯಾಲಿವ್ಯೂ ಹೊಟೇಲ್ ಸಭಾಂಗಣದಲ್ಲಿ ನಡೆದ ‘ತುಳು-ಕೊಡವ (ಕೊಡವ ತಕ್ಕ್) ಭಾಷೆಗಳ ಅಳಿವು ಉಳಿವು’ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಣಕಾಸಿನ ಬಲವಿಲ್ಲದ ಅಕಾಡೆಮಿಗಳನ್ನು ರಚಿಸಿ ಸರಕಾರ ಕೈ ತೊಳೆದುಕೊಳ್ಳುವುದು ಸರಿಯಾದ ಕ್ರಮವಲ್ಲ. ರಾಜ್ಯದ ಪ್ರಮುಖ ಅಲ್ಪಸಂಖ್ಯಾತ ಭಾಷೆಗಳಾದ ತುಳು ಮತ್ತು ಕೊಡವ ಭಾಷೆಗಳನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಅವನತಿಯ ಹಾದಿಯಲ್ಲಿ 181 ಭಾಷೆಗಳು: 2009ರ ಯುನೆಸ್ಕೋ ವಾರ್ಷಿಕ ವರದಿ ಪ್ರಕಾರ ಪ್ರಪಂಚದಲ್ಲಿ ಅವನತಿಯ ಹಾದಿಯಲ್ಲಿರುವ 181 ಭಾಷೆಗಳಲ್ಲಿ ಕೊಡವ ಭಾಷೆ ಕೂಡಾ ಸೇರಿಕೊಂಡಿದೆ. ಈ ಭಾಷೆಯನ್ನು ರಕ್ಷಿಸದಿದ್ದರೆ ಭಾಷಾ ವೈವಿಧ್ಯತೆ ನಾಶವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಸಂಸ್ಕೃತ ಭಾಷೆಯ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಮೀಸಲಿಟ್ಟಿದ್ದು, ಕೊಡವ ಮತ್ತು ತುಳು ಭಾಷೆಯನ್ನು ಉಳಿಸಿಕೊಳ್ಳುವುದಕ್ಕೂ ಬದ್ಧತೆ ತೋರಲಿ ಎಂದರು.

ಕೊಡವ ಭಾಷೆ ನಶಿಸಿ ಹೋಗುವ ಪರಿಸ್ಥಿತಿಯಲ್ಲಿದ್ದು, ಕೊಡವರು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕೊಡವರ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿಗಳನ್ನು ಮ್ಯೂಸಿಯಂಗಳಲ್ಲಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಅದ್ಭುತ ಸಂಸ್ಕೃತಿಗೆ ಪೂರಕವಾದ ಕೊಡವ ಭಾಷೆ ನಶಿಸಿ ಹೋಗಬಾರದು. ಅನಾದಿ ಕಾಲದಿಂದಲೂ ಬಂದ ಸಂಸ್ಕೃತಿಯನ್ನು ಉಳಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು. ಭಾಷೆಯೊಂದಿಗೆ ಸಾಹಿತ್ಯ, ಸಂಸ್ಕೃತಿ ಬೆಳವಣಿಗೆ ಹೊಂದಲಿದ್ದು, ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವಾಗ ಯಾವುದೇ ಪಕ್ಷದವರಾಗಲಿ ಮೊದಲು ನಮ್ಮ ಭಾಷೆ, ಸಂಸ್ಕೃತಿಗೆ ಯಾರು ಹೆಚ್ಚು ಒತ್ತು ನೀಡುತ್ತಾರೋ ಅವರಿಗೆ ಮೊದಲ ಆದ್ಯತೆ ನೀಡುವಂತಾಗಬೇಕು ಎಂದು ಹರಿಪ್ರಸಾದ್ ಹೇಳಿದರು.

ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ನಂದಿನೆರವಂಡ ನಿಶಾ ಅಚ್ಚಯ್ಯ, ಚಂಬಂಡ ಜನತ್, ಕಲಿಯಂಡ ಪ್ರಕಾಶ್ ಅಜ್ಜಿಕುಟ್ಟಿರ ಲೋಕೇಶ್, ಅಜ್ಜಿನಿಕಂಡ ಇನಿತಾ ಮಾಚಯ್ಯ, ಕೂಪದಿರ ಪುಷ್ಪಾ ಮುತ್ತಪ್ಪ, ಚೋಳಪಂಡ ಜ್ಯೋತಿ ನಾಣಯ್ಯ, ಪಟ್ಟಮಾಡ ಲಲಿತ ಗಣಪತಿ, ಮುಕ್ಕಾಟಿರ ರೋಸಿ ಗಣಪತಿ, ಪುಲ್ಲೇರ ಸ್ವಾತಿ ಕಾಳಪ್ಪ, ನಂದಿನೆರವಂಡ ನಿಶಾ ಅಚ್ಚಯ್ಯ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!