ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಹಂಬಲಿಸುವ ಅನೇಕ ಭಕ್ತರಿಗೆ ಈಗ ಆ ಮಾರ್ಗದಲ್ಲಿ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ. ಕಲಿಯುಗದ ಭಗವಂತನ ದರ್ಶನಕ್ಕೆ ಕಾಲ್ನಡಿಗೆಯಲ್ಲೇ ತಿರುಮಲಕ್ಕೆ ತೆರಳುವ ಭಕ್ತರು ಏಳು ಬೆಟ್ಟಗಳನ್ನು ಹತ್ತಿ, ಸಂಕಷ್ಟಗಳು ನಿವಾರಣೆಯಾಗಿ ಸಕಲ ಸೌಭಾಗ್ಯ ದೊರೆಯಲೆಂದು ಶ್ರೀವಾರಿಯ ದರುಶನ ಪಡೆಯುತ್ತಾರೆ.
ಆದರೆ ಕಳೆದ ಕೆಲ ದಿನಗಳಿಂದ ಕಾಲ್ನಡಿಗೆಯಲ್ಲಿ ತಿರುಮಲ ದರ್ಶನಕ್ಕೆ ಬರುವ ಭಕ್ತರಿಗೆ ಕಾಡುಪ್ರಾಣಿಗಳ ಓಡಾಟ ಭಯ ಹುಟ್ಟಿಸುತ್ತಿದೆ. ಚಿರತೆಗಳ ದಾಳಿಗೆ ಬಾಲಕಿ ಪ್ರಾಣ ಕಳೆದುಕೊಂಡಿದ್ದು, ಒಬ್ಬ ಬಾಲಕ ಬಚಾವ್ ಆಗಿದ್ದಾನೆ. ಇದುವರೆಗೂ ಆರು ಚಿರತೆಗಳಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಈ ಭಯದ ಬೆನ್ನಲ್ಲೇ ಮತ್ತೆ ಕಾಲ್ನಡಿಗೆಯಲ್ಲಿ ಕರಡಿ ಓಡಾಟ ಮತ್ತಷ್ಟು ಭಯ ಹೆಚ್ಚಿಸಿದೆ.
ನಿನ್ನೆ ರಾತ್ರಿ 12:30ಕ್ಕೆ ನರಸಿಂಹ ಸ್ವಾಮಿ ದೇವಸ್ಥಾನದ ಕಾಲುದಾರಿಯಲ್ಲಿ ಕರಡಿ ತಿರುಗಾಡುತ್ತಿರುವುದನ್ನು ಭದ್ರತಾ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಭಕ್ತರ ಓಡಾಟ ನಿಷೇಧಿಸಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ತಿರುಮಲ ಬೆಟ್ಟಗಳಲ್ಲಿ ಕಾಡುಪ್ರಾಣಿಗಳ ಕಾಟ ಹೆಚ್ಚಾಗಿದ್ದು, ಸುರಕ್ಷತೆಗಾಗಿ ಮತ್ತಷ್ಟು ಬಿಗಿ ಭದ್ರತೆಗೆ ಕ್ರಮ ಕೈಗೊಳ್ಳುವಂತೆ ಭಕ್ತರು ಮನವಿ ಮಾಡಿದ್ದಾರೆ.