ಆಳ್ವಾಸ್‌ ಸಾರಥ್ಯದಲ್ಲಿ ‘ಸಾಂಸ್ಕೃತಿಕ ಜಾಂಬೂರಿ’ಗೆ ಸಜ್ಜಾಗುತ್ತಿದೆ ಬೆದ್ರ!

-ಹರೀಶ್ ಕೆ. ಆದೂರು

‘ಪ್ರಥಮ’ಗಳ ಪಟ್ಟಿಗೆ ಮತ್ತೊಮ್ಮೆ ಆಳ್ವಾಸ್ ತನ್ಮೂಲಕ ಮೂಡುಬಿದಿರೆ ಸಾಕ್ಷಿಯಾಗಲಿದೆ!
ರಾಷ್ಟ್ರದ ಮೂಲೆಮೂಲೆಗಳಿಂದ, ವಿವಿಧ ಆಯ್ದ ದೇಶಗಳಿಂದ 50 ಸಹಸ್ರಕ್ಕೂ ಮಿಕ್ಕಿದ ‘ಯುವ ಶಕ್ತಿ’ಯ ಸಂಗಮದ ಮೂಲಕ ಮೂಡುಬಿದಿರೆಯ ನೆಲ ಹಲವು ‘ಪ್ರಥಮ’ಗಳನ್ನು ದಾಖಲಿಸಿ, ದೊಡ್ಡ ಮಟ್ಟದ ಸಂಚಲನದ ಸೃಷ್ಠಿ ತನ್ಮೂಲಕ ಭವಿಷ್ಯದ ಸಾಧ್ಯತೆಯ ಸ್ಪಷ್ಟ ಪರಿಕಲ್ಪನೆಯನ್ನು ‘ಸಾರುವ’ ಬೃಹತ್ ಸಂಗಮವೊಂದು ಇದೇ ದಶಂಬರದಲ್ಲಿ ನಡೆಯಲಿದೆ.

ಇದೊಂದು ಐತಿಹಾಸಿಕ ಕ್ಷಣವಾಗಿಯೂ ಮೂಡಿ ಬರುವುದರಲ್ಲಿ ಯಾವ ಸಂದೇಹವೂ ಇಲ್ಲ.

ಇಷ್ಟಕ್ಕೂ ಏನಿದು?

ಏನಿದು ಎಂಬ ಕುತೂಹಲ ಸರ್ವೇ ಸಾಮಾನ್ಯ. ಮೂಡುಬಿದಿರೆಯೆಂದರೆ ‘ಆಳ್ವಾಸ್’ ಎಂಬ ಛಾಪು ಈಗಾಗಲೇ ಮೂಡಿಸಿಯಾಗಿದೆ. ಆಳ್ವಾಸ್ ಎಂದರೆ ಅದೊಂದು ‘ಅಸಾಮಾನ್ಯ’ ಎಂಬುದೂ ಸಾಬೀತಾಗಿದೆ. ಈ ಅಸಾಮಾನ್ಯ ಕಾರ್ಯವೂ ಆಳ್ವಾಸ್ ಸಮೂಹ ಸಂಸ್ಥೆಗಳ ಆಶ್ರಯದಲ್ಲೇ ನಡೆಯುತ್ತಿರುವುದು ಗಮನಾರ್ಹ. ಅಂತಾರಾಷ್ಟ್ರೀಯ ಮಟ್ಟದ ಸ್ಕೌಟ್ ಅಂಡ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಇದೇ ಮೂಡುಬಿದಿರೆಯಲ್ಲಿ ‘ನಭೂತೋ’ ಎಂಬಂತೆ ಮೊಟ್ಟ ಮೊದಲ ಬಾರಿಗೆ ನಡೆಯಲಿದೆ. ಪ್ರಥಮ ಬಾರಿಗೆ ಸಾಂಸ್ಕೃತಿಕ ಜಾಂಬೂರಿ ನಡೆಯುತ್ತಿದೆ. ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವುದು ಇದೇ ಮೊದಲ ಬಾರಿ. ಹಾಗಾಗಿ ಇದೊಂದು ದೊಡ್ಡ ಮಟ್ಟದ ದಾಖಲೆಯ ಕಾರ್ಯಕ್ರಮವಾಗಿ ಅವಿಸ್ಮರಣೀಯವಾಗಿ ಮೂಡಿಬರಲಿದೆ.

ಇರಲಿದೆ ಹಲವು ಮೇಳ!
ಆಳ್ವಾಸ್ ಕ್ಯಾಂಪಸ್ ಏಳೂ ದಿನಗಳ ಕಾಲ ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲೂ ಜೀವಕಳೆಯಿಂದ ಕಂಗೊಳಿಸುವಂತಹ ಅದ್ಭುತ ಪರಿಕಲ್ಪನೆಯನ್ನು ಡಾ. ಎಂ.ಮೋಹನ ಆಳ್ವ ರೂಪಿಸಿದ್ದಾರೆ. ಕೃಷಿಮೇಳ, ಕಲಾ ಮೇಳ, ವಿಜ್ಞಾನ ಮೇಳ, ಆಹಾರೋತ್ಸವ, ಪುಸ್ತಕ ಮೇಳಗಳನ್ನು ಅಳವಡಿಸಲಾಗಿದೆ. 6ನೇ ತರಗತಿಯಿಂದ 10ನೇ ತರಗತಿಯ ತನಕದ ಸ್ಕೌಟ್, ಗೈಡ್ಸ್, ರೋವರ್‍ಸ್ ರೇಂಜರ್‍ಸ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಳ್ಳುವರು.

ಕಾರ್ಯಕ್ರಮದ ಉದ್ದೇಶ ಸ್ಪಷ್ಟವಿದೆ
ಸ್ಪಷ್ಟ ಉದ್ದೇಶವನ್ನಿಟ್ಟುಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಎಲ್ಲೂ ಲೋಪಗಳಿಲ್ಲದಂತೆ ವ್ಯವಸ್ಥೆ ನಡೆಯಲಿದೆ. ಸ್ಕೌಟ್ ಗೈಡ್ಸ್ ನ ಆಶ್ರಯ, ಉದ್ದೇಶಗಳನ್ನು ನಿಜಾರ್ಥದಲ್ಲಿ ಪರಿಚಯಿಸುವ ಜೊತೆಗೆ ವಿದ್ಯಾರ್ಥಿಗಳಿಗೆ ಹಲವು ವಿಚಾರಗಳ ಪರಿಚಯ ಮಾಡುವ ನಿಟ್ಟಿನಲ್ಲಿ ಪ್ರವಾಸ, ಬೃಹತ್ ಸಾಂಸ್ಕೃತಿಕ ವಿನಿಮಯಗಳು ನಡೆಯಲಿವೆ. ಆಳ್ವಾಸ್ ಸಮೂಹ ಸಂಸ್ಥೆಗಳ ನೂರೆಕ್ಕರೆ ಪ್ರದೇಶವನ್ನು ‘ಜೀವಂತಿಕೆ’ಯಿಂದ ಸಜ್ಜುಗೊಳಿಸಲು ಸಿದ್ದತೆಗಳು ಆರಂಭವಾಗಿದೆ. ಒಂದು ವಾರಗಳ ಒಟ್ಟೂ ಕಾರ್ಯಕ್ರಮಗಳು ವಿಭಿನ್ನ ಅನುಭವಗಳನ್ನು ಕಟ್ಟಿಕೊಡಲಿದೆ.

ಇದೇ ಸಾಂಸ್ಕೃತಿಕ ಜಾಂಬೂರಿ ಉದ್ದೇಶ
ಜಗತ್ತಿನಲ್ಲಿ ಎಲ್ಲೂ ಇಲ್ಲದ ಅತ್ಯಂತ ಶ್ರೀಮಂತಿಕೆಯ ಸಂಸ್ಕೃತಿ ನಮ್ಮ ದೇಶದಲ್ಲಿದೆ. ಮೊದಲ ತರಗತಿಯಿಂದ ಆರಂಭಗೊಂಡು ಪಿ.ಜಿಯ ತನಕ 46 ಕೋಟಿ ವಿದ್ಯಾರ್ಥಿಗಳು ಇದ್ದಾರೆ. ಇಂತಹ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಭವಿಷ್ಯದ ದೇಶದ ಪ್ರಮುಖ ಶಕ್ತಿ. ವಿದ್ಯಾರ್ಥಿ ದೆಸೆಯಲ್ಲಿಯೇ ಅವರಿಗೆ ಸ್ವದೇಶೀ ಚಿಂತನೆ, ದೇಶಪ್ರೇಮ, ಸೇವಾ ಮನೋಭಾವ, ಸಾಹಸೀ ಬದುಕು, ಕೌಶಲ್ಯಾಭಿವೃದ್ಧಿ, ಸಾಂಸ್ಕೃತಿಕ ಪ್ರಜ್ಞೆ, ಭಾಷಾ ಪ್ರೇಮ, ಕ್ರೀಡಾ ಮನೋಭಾವಗಳನ್ನು ರೂಢಿಸುವ ಕಾರ್ಯ ಆಗಬೇಕಾಗಿದೆ. ಇದಾದದ್ದೇ ಆದಲ್ಲಿ ಭವಿಷ್ಯದ ಭಾರತದ ಅನರ್ಘ್ಯ ರತ್ನಗಳಾಗಿ ಅವರು ರೂಪುಗೊಳ್ಳಲು ಸಾಧ್ಯ. ಅದೇ ಸಾಂಸ್ಕೃತಿಕ ಜಾಂಬೂರಿಯ ಉದ್ದೇಶವಾಗಿದೆ ಎನ್ನುತ್ತಾರೆ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ. ಎಂ. ಮೋಹನ ಆಳ್ವಾ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!