ಬೀಜಿಂಗ್ ಒಲಿಂಪಿಕ್ಸ್ ಉದ್ಘಾಟನೆ-ಸಮಾರೋಪ ಸಮಾರಂಭ ಬಹಿಷ್ಕರಿಸಿದ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭವನ್ನು ಬಹಿಷ್ಕರಿಸಲು ಭಾರತೀಯ ರಾಜತಾಂತ್ರಿಕರು ನಿರ್ಧರಿಸಿದ್ದಾರೆ.

ಚೀನಾ 2020ರಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರ ವಿರುದ್ಧ ಆಕ್ರಮಣ ಮಾಡಿ ಗಾಯಗೊಂಡ ಸೈನಿಕನನ್ನು ಟಾರ್ಚ್‌ಬೇರ್ ಆಗಿ ಅಂದರೆ ಒಲಿಂಪಿಕ್ ಜ್ಯೋತಿಯನ್ನು ಹಿಡಿದುಕೊಳ್ಳಲು ಆಯ್ಕೆ ಮಾಡಿದ ಬೆನ್ನಲ್ಲೇ ಭಾರತ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.

ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯ ನಮ್ಮ ಚಾರ್ಜ್ ಡಿ ಅಫೇರ್ಸ್ ಬೀಜಿಂಗ್ 22ರ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಅಥವಾ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಲು ಬಯಸುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಓರ್ವ ಕ್ರೀಡಾಪಟು ಮಾತ್ರ ಭಾಗಿ
ಚೀನಾ ಒಲಿಂಪಿಕ್ಸ್‌ನಂತಹ ಮಹತ್ವದ ಕಾರ್ಯಕ್ರಮವನ್ನು ರಾಜಕೀಯಗೊಳಿಸಲು ಈ ಆಯ್ಕೆ ಮಾಡಿಕೊಂಡಿರುವುದು ನಿಜಕ್ಕೂ ವಿಷಾದನೀಯ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಅಲ್ಲದೇ ಕ್ರೀಡಾಕೂಟದಲ್ಲಿ ಚೀನಾದ ನಡೆ ಪ್ರಚೋದನಕಾರಿ ಎಂದು ಅನೇಕರು ಪರಿಗಣಿಸಿದ್ದಾರೆ. ನಾಳೆಯಿಂದ ಆರಂಭವಾಗಲಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾರತದ ಒಬ್ಬ ಅಥ್ಲೀಟ್ ಸ್ಕೀಯರ್ ಆರಿಫ್ ಮೊಹಮ್ಮದ್ ಖಾನ್ ಮಾತ್ರ ಭಾಗವಹಿಸುತ್ತಿದ್ದಾರೆ.

ಹೀರೋ ಎಂದ ಚೀನೀ ಮಾಧ್ಯಮ
ಗಾಲ್ವಾನ್ ಕಣಿವೆ ಸಂಘರ್ಷದ ಸಮಯದಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿಯಲ್ಲಿನ ರೆಜಿಮೆಂಟ್ ಕಮಾಂಡರ್ ಕಿ ಫಾಬಾವೊ ತಲೆಗೆ ಗಂಭೀರ ಗಾಯಗೊಂಡಿದ್ದರು. ಕ್ರೀಡಾಕೂಟದಲ್ಲಿ 1,200 ಪಂಜುಧಾರಿಗಳಲ್ಲಿ ಫಾಬಾವೋ ಒಬ್ಬರಾಗಿದ್ದಾರೆ. ಚೀನೀ ಮಾಧ್ಯಮವು ಅವರನ್ನು ಹೀರೋ ಎಂದು ಗೌರವಿಸಿ, ಅವರ ಸೇರ್ಪಡೆಯನ್ನು ವರದಿ ಮಾಡಿದೆ.

ಡಿಡಿಯಲ್ಲಿ ನೇರ ಪ್ರಸಾರವೂ ಇಲ್ಲ
ವಿದೇಶಾಂಗ ಸಚಿವಾಲಯದ ಪ್ರಕಟಣೆಯ ನಂತರ, ರಾಷ್ಟ್ರೀಯ ಪ್ರಸಾರಕ ದೂರದರ್ಶನ ಉದ್ಘಾಟನಾ ಅಥವಾ ಸಮಾರೋಪ ಸಮಾರಂಭವನ್ನು ನೇರ ಪ್ರಸಾರ ಮಾಡುವುದಿಲ್ಲ ಎಂದು ಹೇಳಿದೆ. ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳನ್ನು ದೂರದರ್ಶನದಲ್ಲಿ ನೇರ ಪ್ರಸಾರ ಮಾಡುವುದಿಲ್ಲ ಎಂದು ಪ್ರಸಾರ ಭಾರತಿಯ ಮುಖ್ಯಸ್ಥ ಶಶಿ ಶೇಖರ್ ವೆಂಪತಿ ಟ್ವೀಟ್ ಮಾಡಿದ್ದಾರೆ.

ಜೂನ್ 2020ರಲ್ಲಿ ಗಾಲ್ವಾನ್‌ನಲ್ಲಿ ನಡೆದ ಘರ್ಷಣೆಯಲ್ಲಿ ಇಪ್ಪತ್ತು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಇದು ಸುಮಾರು ಆರು ದಶಕಗಳಲ್ಲೇ ಮೊದಲು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!