ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೀಟಮ್ಮ ಗ್ಯಾಂಗ್ ಹಾವಳಿಗೆ ಮಲೆನಾಡು ಕಂಗಾಲಾಗಿದೆ. ಈ ಆನೆಗಳ ಗ್ಯಾಂಗ್ ದಿನಕ್ಕೊಂದು ಭಾಗಕ್ಕೆ ಭೇಟಿ ನೀಡುತ್ತಿದ್ದು, ಬೆಳೆಯೆಲ್ಲಾ ಹಾಳಾಗಿದೆ. ಜೊತೆಗೆ ಜನ ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ.
ಮುಂಜಾಗ್ರತ ಕ್ರಮವಾಗಿ ಅರಣ್ಯ ಇಲಾಖೆ ಆಲ್ದೂರು ಹೋಬಳಿಯ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಮೈಕ್ ಅನೌನ್ಸ್ ಮಾಡಿ ಎಚ್ಚರಿಕೆ ನೀಡಿದ್ದಾರೆ. ವಾಹನ ಸವಾರರು, ಕಾರ್ಮಿಕರು, ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.
ಆಲ್ದೂರು ಸಮೀಪದ ಆಲ್ದೂರು ಪುರ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ ಬೀಟಮ್ಮ ಗ್ಯಾಂಗ್ 17 ಆನೆಗಳು ತೋಟದ ತುಂಬಾ ಓಡಾಡಿ ಸಾಕಷ್ಟು ದಾಂಧಲೆ ಮಾಡುತ್ತಿವೆ. ಬೀಟಮ್ಮ ಗ್ಯಾಂಗ್ ಹಾವಳಿಗೆ ಕಾಫಿ ಬೆಳೆ ಬಗ್ಗೆ ಬೆಳೆಗಾರರು ಕಂಗಾಲಾಗಿದ್ದಾರೆ. ಕಾಫಿ ಕೊಯ್ಲಿಗೆ ಬಂದಿರೋದ್ರಿಂದ ಆನೆ ಹಾವಳಿಗೆ ಹಣ್ಣಾಗಿರೋ ಕಾಫಿ ಉದುರುವ ಆತಂಕದಲ್ಲಿ ಹತ್ತಾರು ಹಳ್ಳಿಯ ಬೆಳೆಗಾರರಿದ್ದಾರೆ. ತೋರಣಮಾವು, ತುಡುಕೂರು, ಮಡೆನೆರಲು, ನೊಜ್ಜೆಪೇಟೆ, ಹಳೇ ಆಲ್ದೂರು, ಆಲ್ದೂರು ಹೊಸಳ್ಳಿ, ಎಲಗುಡಿಗೆ ಭಾಗದ ಸುತ್ತಮುತ್ತವೇ ಆನೆಗಳ ಸಂಚಾರ ಇರೋದ್ರಿಂದ ಜನರಲ್ಲಿ ಆತಂಕ ಮೂಡಿದೆ.