ಹೊಸದಿಗಂತ ಡಿಜಿಟಲ್ ಡೆಸ್ಕ್:
ಚನ್ನಪಟ್ಟಣದ ಉಪಚುನಾವಣಾ ಅಖಾಡದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಧುಮುಕಿದ್ದಾರೆ. ಶತಾಯಗತಾಯ ಮೊಮ್ಮಗನನ್ನು ಗೆಲ್ಲಿಸಿಕೊಂಡೇ ಬರಬೇಕು ಎಂದು ಪ್ರಚಾರದ ಕಣದಲ್ಲಿ ಓಡಾಡುತ್ತಿದ್ದಾರೆ.
ಕ್ಷೇತ್ರದ ಉಪ ಚುನಾವಣೆಯ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಸತತ ಮೂರನೇ ದಿನವೂ ಪ್ರಚಾರ ನಡೆಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಡಿಕೆಶಿ ಸಹೋದರರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಇದೇ ಸಮಯದಲ್ಲಿ ಮೇಕೆದಾಟು ವಿಚಾರ ಪ್ರಸ್ತಾಪಿಸಿದ ಮಾಜಿ ಪ್ರಧಾನಿ ದೇವೇಗೌಡರು, ಮೇಕೆದಾಟು ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾತ್ರ ಪೂರ್ಣಗೊಳಿಸಲು ಸಾಧ್ಯ. ಬೇರೆ ಯಾರಿಂದಲೂ ಸಾಧ್ಯವಿಲ್ಲ. ತಮಿಳರು ನಮ್ಮ ಕುತ್ತಿಗೆಯನ್ನು ಹಿಡಿದುಕೊಂಡಿದ್ದಾರಾ? ಎಂದು ಪ್ರಶ್ನಿಸಿದರು ಅದರ ಜೊತೆಗೆ ನರೇಂದ್ರ ಮೋದಿಯವರ ಕೈಯಿಂದ ಮೇಕೆದಾಟು ಯೋಜನೆ ಪೂರ್ಣಗೊಳಿಸಿಯೇ ನಾನು ಕೊನೆಯುಸಿರೆಳೆಯುತ್ತೇನೆ ಎಂದು ಶಪಥ ಮಾಡಿದ್ದಾರೆ.
ಮುಂದುವರಿದು ಮಾತನಾಡಿದ ಅವರು ಕನಕಪುರವನ್ನು ಲೂಟಿ ಮಾಡುವ ಕೆಲಸ ನಡೆಯುತ್ತಿದೆ. ಜನರ ರಕ್ತ ಹಿರಲಾಗುತ್ತಿದೆ ಎಂದು ಮಾಜಿ ಪ್ರಧಾನಿಗಳು ಆಕ್ರೋಶ ವ್ಯಕ್ತಪಡಿಸಿದರು.
ಕನಕಪುರಕ್ಕೆ ಹೋಗಿ ನೋಡಿಕೊಂಡು ಬನ್ನಿ. ಬೇರೆಯವರ ಜಮೀನನ್ನು ಹೇಗೆ ಲೂಟಿ ಮಾಡಿದ್ದಾರೆ ಅಂತ ನೋಡಿಕೊಂಡು ಬನ್ನಿ ಎಂದು ಆರೋಪ ಮಾಡಿದ ಮಾಜಿ ಪ್ರಧಾನಿಗಳು, ನಾನು ಇನ್ನೊಂದು ಚುನಾವಣೆಗೆ ರಾಮಪುರಕ್ಕೆ ಬರುತ್ತೇನೆ. ಅವರು ನಿಮ್ಮ ರಕ್ತ ಹೀರುತ್ತಿದ್ದಾರೆ. ಇಂತಹ ಸರ್ಕಾರವನ್ನು ಕಿತ್ತು ಒಗೆಯಬೇಕು ಎಂದು ದೇವೆಗೌಡರು ಗುಡುಗಿದರು.
ನಾನು ಸಾಮಾನ್ಯ ರೈತನ ಮಗ. ರೈತರ ಕಷ್ಟ ನನಗೆ ಗೊತ್ತು.ನಾನು ನನ್ನ ಮೊಮ್ಮಗನ ಗೆಲ್ಲಿಸಲು ಬಂದಿದ್ದೇನೆ ಎನ್ನುತ್ತಾರೆ ಕಾಂಗ್ರೆಸ್ ನವರು. ನಾನು ನಿಮ್ಮ ಆಶೀರ್ವಾದದ ಬಲದಿಂದ ಇನ್ನೂ ನಾಲ್ಕಾರು ವರ್ಷ ಬದುಕಿರುತ್ತೇನೆ. ಹೋರಾಟ ಮಾಡ್ತೇನೆ. ಈ ಸರ್ಕಾರ ಲೂಟಿ ಮಾಡುತ್ತಿದೆ. ಇಂತಹ ಸರ್ಕಾರವನ್ನು ತೆಗೆಯುವ ತನಕ ರಾಜ್ಯಕ್ಕೆ ನೆಮ್ಮದಿ ಇಲ್ಲ. ಬಡವರು ಬದುಕಲ್ಲ, ರೈತರಿಗೆ ನೆಮ್ಮದಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.