ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಹಾಲಿ ಉಪಾಧ್ಯಕ್ಷೆ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳುವಂತೆ ತಮ್ಮ ಬೆಂಬಲಿಗರನ್ನು ಕೇಳಿಕೊಂಡಿದ್ದಾರೆ.
ಈ ವೇಳೆ ‘ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುತ್ತೇನೆ’ ಎಂದು ಪ್ರತಿಜ್ಞೆ ಮಾಡಿದ್ದಾರೆ.
ತಾವು ಕಲಿತ ಹಾವರ್ಡ್ ವಿಶ್ವವಿದ್ಯಾಲಯದಲ್ಲಿಭಾವುಕವಾಗಿ ಭಾಷಣ ಮಾಡಿದ ಕಮಲಾ, ‘ನಾನು ಈ ಚುನಾವಣೆಯಲ್ಲಿ ಸೋಲು ಒಪ್ಪಿಕೊಂಡಿದ್ದೇನೆ. ಆದರೆ ನನ್ನ ಪ್ರಚಾರ ಅಭಿಯಾನವನ್ನು ಉತ್ತೇಜಿಸಿರುವ ಹೋರಾಟವನ್ನು ಮುಂದುವರಿಸುತ್ತೇನೆ’ ಎಂದು ಹೇಳಿದರು.
ದೇಶದ ಮೂಲಭೂತ ತತ್ವಗಳನ್ನು ರಕ್ಷಿಸಲು ನಡೆಸುತ್ತಿರುವ ಹೋರಾಟವನ್ನು ಬಿಟ್ಟುಬಿಡಬೇಡಿ ಎಂದು ಅವರು ತಮ್ಮ ಬೆಂಬಲಿಗರಿಗೆ ಮನವಿ ಮಾಡಿದರು.
‘ನೀವು ನನ್ನ ಮೇಲೆ ಇಟ್ಟಿರುವ ವಿಶ್ವಾಸ, ನಮ್ಮ ದೇಶದ ಮೇಲೆ ತೋರಿರುವ ಪ್ರೀತಿ ಮತ್ತು ನಿಮ್ಮ ದೃಢನಿಶ್ಚಯದಿಂದಾಗಿ ನನ್ನ ಹೃದಯ ತುಂಬಿದೆ’ ಎಂದ ಅವರು ತಮ್ಮ ಬೆಂಬಲಿಗರ ಉತ್ಸಾಹವನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು.
‘ನಾವು ಬಯಸಿದ್ದ ಫಲಿತಾಂಶ ಈ ಚುನಾವಣೆಯಲ್ಲಿ ಬಂದಿಲ್ಲ. ನಾವು ಯಾವ ಉದ್ದೇಶಕ್ಕಾಗಿ ಹೋರಾಟ ನಡೆಸಿದ್ದೇವೋ ಅದು ಗುರಿ ತಲುಪಲಿಲ್ಲ. ಆದರೆ, ನಾನು ಹೇಳುವುದನ್ನು ಕೇಳಿ. ಅಮೆರಿಕದ ಭರವಸೆಯ ಬೆಳಕು ಯಾವಾಗಲೂ ಪ್ರಕಾಶಮಾನವಾಗಿ ಉರಿಯುತ್ತಲೇ ಇರುತ್ತದೆ’ ಎಂದರು.
‘ಜನರು ಈಗ ಹಲವು ರೀತಿಯ ಭಾವನೆಗಳನ್ನು ಅನುಭವಿಸುತ್ತಿದ್ದಾರೆ ಎಂಬುದು ತಿಳಿದಿದೆ. ನಿಮ್ಮ ಭಾವನೆಗಳು ನನಗೆ ಅರ್ಥವಾಗುತ್ತಿದೆ. ಏನೇ ಆಗಲಿ, ಈ ಚುನಾವಣೆಯ ಫಲಿತಾಂಶವನ್ನು ನಾವು ಒಪ್ಪಿಕೊಳ್ಳಲೇಬೇಕು. ಚುನಾವಣಾ ಫಲಿತಾಂಶ ಒಪ್ಪಿಕೊಳ್ಳುವುದು ಪ್ರಜಾಪ್ರಭುತ್ವದ ಮೂಲಭೂತ ತತ್ವವಾಗಿದೆ’ ಎಂದು ಹೇಳಿದರು.