ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕಾರಕ್ಕೆ ಆಗ್ರಹಿಸಿ ಕಳೆದ 118 ದಿನಗಳಿಂದ ಕನ್ನಡ ಸಂಘಟನೆಗಳು ನಡೆಸುತ್ತಿರುವ ನಿರಂತರ ಹೋರಾಟ ಮಂಗಳವಾರದಂದು ಪ್ರಮುಖ ತಿರುವು ಪಡೆದುಕೊಂಡಿದೆ. ಪಾಲಿಕೆಯಲ್ಲಿ “ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ಅಧಿಕೃತ ಗೊತ್ತುವಳಿಯನ್ನು ಸ್ವೀಕರಿಸುವವರೆಗೂ ರಾಜ್ಯ ಸರ್ಕಾರವು ಮಹಾನಗರ ಪಾಲಿಕೆಗೆ ಯಾವುದೇ ರೀತಿಯ ಅನುದಾನವನ್ನು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಗಡಿನಾಡು ಕನ್ನಡಿಗರ ಸೇನೆಯು ತೀವ್ರ ಪ್ರತಿಭಟನೆ ನಡೆಸಿತು.
ಮಂಗಳವಾರ ಗಡಿನಾಡು ಕನ್ನಡಿಗರ ಸೇನೆಯ ಕಾರ್ಯಕರ್ತರು ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯ ಎದುರು, ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರರು-ಉಪ ಮಹಾಪೌರರ ವಿರುದ್ಧ ಆಕ್ರೋಶವನ್ನು ಹೋರ ಹಾಕಿ ಪ್ರತಿಭಟನೆ ನಡೆಸಿದರು.
“ನಿಲ್ಲಿಸಿ, ನಿಲ್ಲಿಸಿ, ಬೆಳಗಾವಿ ಪಾಲಿಕೆಗೆ ಅನುದಾನ ನಿಲ್ಲಿಸಿ!”: ಎಂಬ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಸ್ಥಳದಲ್ಲಿದ್ದ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಬಿರಾದಾರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮಹಾಪೌರ-ಉಪಮಹಾಪೌರರ ನಡೆಗೆ ತೀವ್ರ ಟೀಕೆ:
ಇತ್ತಿಚಿಗೆ ನೂತನ ಮುಖ್ಯಮಂತ್ರಿಗಳಾಗಿ ಮೊದಲ ಬಾರಿಗೆ ಬೆಳಗಾವಿಗೆ ಭೇಟಿ ನೀಡಿದ್ದಾಗ, ಅವರನ್ನು ಸ್ವಾಗತಿಸಲು ಮಹಾಪೌರ ಪ್ರೀತಿ ಕಾಮಕರ -ಉಪ ಮಹಾಪೌರ ಹಣಮಂತ ಕೊಂಗಾಲಿ ಅವರು ಹೋಗಿರಲಿಲ್ಲ. ಆದರೆ, ತದನಂತರ ಕದ್ದುಮುಚ್ಚಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪಾಲಿಕೆಗೆ 250 ಕೋಟಿ ರೂಪಾಯಿಗಳ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿರುವುದು ಇವರ “ನಿರ್ಲಜ್ಜ ವರ್ತನೆಗೆ” ಸಾಕ್ಷಿಯಾಗಿದೆ ಎಂದು ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ ತೀವ್ರವಾಗಿ ಅಸಮಾಧಾನ ಹೋರ ಹಾಕಿದರು.
“ಜಿಲ್ಲಾ ಉಸ್ತುವಾರಿ ಸಚಿವರನ್ನು ಅಥವಾ ಸ್ಥಳೀಯ ಶಾಸಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳಲ್ಲಿ ಅನುದಾನ ಕೋರುವ ಕನಿಷ್ಠ ಸೌಜನ್ಯವನ್ನೂ ತೋರದ ಈ ಮಹಾಪೌರರು ಮತ್ತು ಉಪ ಮಹಾಪೌರರು, ಕರ್ನಾಟಕ ಸರ್ಕಾರದ ಬದಲಾಗಿ ಮಹಾರಾಷ್ಟ್ರ ಸರ್ಕಾರದಿಂದಲೇ ಅನುದಾನ ಕೇಳುವುದು ಸೂಕ್ತ” ಎಂದು ಟೀಕಿಸಿದರು.
ಪ್ರಮುಖರಿಗೆ ಪತ್ರ ಮುಖೇನ ಆಗ್ರಹ:
ಕರ್ನಾಟಕ ಪರ ಗೊತ್ತುವಳಿ ಪಾಸ್ ಮಾಡಿ ಸರ್ಕಾರಕ್ಕೆ ಸಲ್ಲಿಸುವವರೆಗೂ ಪಾಲಿಕೆಗೆ ಯಾವುದೇ ಹಣಕಾಸಿನ ನೆರವು ನೀಡಬಾರದು ಎಂದು ಪ್ರತಿಭಟನಾಕಾರರು ಮುಖ್ಯಮಂತ್ರಿಗಳು, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಕಾವೇರಿ ಅವರಿಗೆ ಪತ್ರ ಬರೆಯುವ ಮೂಲಕ ಕಳವಳ ವ್ಯಕ್ತಪಡಿಸಿದರು.
ಹೋರಾಟ ತೀವ್ರಗೊಳಿಸುವ ಎಚ್ಚರಿಕೆ:
ಇನ್ಮುಂದೆ “ಬೆಳಗಾವಿ ಪಾಲಿಕೆಗೆ ಅನುದಾನ ನಿಲ್ಲಿಸಿ” ಒಂದು ವೇಳೆ ಪಾಲಿಕೆಗೆ ಅನುಧಾನ ನೀಡಿದರೆ ತೀವುವಾಗಿ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ, ಈ ವಿಚಾರದ ಬಗ್ಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೊತೆಗೆ ಗಂಭೀರವಾಗಿ ಚರ್ಚೆ ನಡೆಸಲಾಗುವುದು ಎಂದು ಪ್ರತಿಭಟನೆಯಲ್ಲಿ ಬಲರಾಮ ಮಾಸೇನಟ್ಡಿ ಆಗ್ರಹಿಸಿದರು.
ಇದನ್ನೂ ಓದಿ:
ಈ ವೇಳೆ ಸಂತೋಷ ಮಾಸೇನಟ್ಟಿ, ಸಂತೋಷ ತಳ್ಳಿಮನಿ, ಎಸ್.ಎಸ್. ಮೂಕನವರ, ಮಂಜುನಾಥ, ಶಾನುರ ಮುಚ್ಚಂಡಿ, ಜ್ಯೋತಿಕುಮಾರ ಹುಲೆನ್ನವರ, ರಾಹುಲ್ ಭೋಸ್ಲೆ, ಆನಂದ ಬಿಲಾವರ, ಶಿವಾಜಿ ಗುರವ, ಸಾಗರ ಪೂಜೇರಿ, ಅನು ಎಸ್.ಆರ್. ವಂದನಾ ಹೊರಕೇರಿ, ಸೇರಿದಂತೆ ಹಲವು ಕನ್ನಡಪರ ಕಾರ್ಯಕರ್ತರು ಉಪಸ್ಥಿತರಿದ್ದರು.



