ಹೊಸದಿಗಂತ ಬೆಳಗಾವಿ:
ಮುಂಬರುವ ಮೇ 28 ರಂದು ಆಚರಿಸಲಾಗುವ ಮುಸ್ಲಿಮರ ಪವಿತ್ರ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾದ್ಯಂತ ಎಲ್ಲಾ ಕಸಾಯಿಖಾನೆಗಳನ್ನು ಸಂಪೂರ್ಣವಾಗಿ ಮುಚ್ಚಬೇಕೆಂದು ಆಗ್ರಹಿಸಿ ಶ್ರೀ ರಾಮ ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಗುರುವಾರ ಶ್ರೀ ರಾಮ ಸೇನೆಯ ಉತ್ತರ ಕರ್ನಾಟಕ ಭಾಗದ ರಾಜ್ಯಾಧ್ಯಕ್ಷರಾದ ರವಿಕುಮಾರ ಕೋಕಿತರ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಕಾರ್ಯಕರ್ತರ ನಿಯೋಗ, ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಅಕ್ರಮ ಜಾನುವಾರು ಸಾಗಾಟ ಮತ್ತು ಗೋಹತ್ಯೆ ಪ್ರಕರಣಗಳ ವಿರುದ್ಧ ಪ್ರತಿಭಟನೆ ನಡೆಸಿತು. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪ್ರಾಣಿಗಳ ಅಕ್ರಮ ಸಾಗಾಣಿಕೆಯನ್ನು ತಕ್ಷಣವೇ ತಡೆಗಟ್ಟಬೇಕು ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರವಿಕುಮಾರ್ ಕೋಕಿತಕರ್, “ಹಿಂದೂ ಧರ್ಮದಲ್ಲಿ ಗೋವನ್ನು ತಾಯಿಯಂತೆ ಪೂಜಿಸಲಾಗುತ್ತದೆ. ನಮ್ಮ ಕಣ್ಣೆದುರೇ ಗೋಮಾತೆಯ ಹತ್ಯೆಯಾಗುವುದನ್ನು ಸಹಿಸಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಅಕ್ರಮವಾಗಿ ಪ್ರಾಣಿಗಳನ್ನು ಕಸಾಯಿಖಾನೆಗಳಿಗೆ ಸಾಗಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,” ಎಂದರು. ಅಲ್ಲದೆ, ಭಾರತೀಯ ಸಂವಿಧಾನದ 48ನೇ ಕಲಂ ಪ್ರಕಾರ ಕೃಷಿ ಮತ್ತು ಪಶುಸಂಗೋಪನೆಯನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದು ಹಾಗೂ ಜಾನುವಾರುಗಳ ಹತ್ಯೆಯನ್ನು ನಿಷೇಧಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂಬುದನ್ನು ಅವರು ನೆನಪಿಸಿದರು.
ಶ್ರೀ ರಾಮ ಸೇನೆ ಮಂಡಿಸಿರುವ ಪ್ರಮುಖ ಬೇಡಿಕೆಗಳು:
ಜಿಲ್ಲೆಯ ಎಲ್ಲಾ ಪ್ರಮುಖ ರಸ್ತೆಗಳು, ಗಡಿ ಭಾಗಗಳು ಹಾಗೂ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ವಾಹನ ತಪಾಸಣೆ ನಡೆಸಬೇಕು.
ಹೈನುಗಾರಿಕೆಗಾಗಿ ಗೋವುಗಳನ್ನು ಸಾಗಿಸುವ ವಾಹನಗಳು ಕಡ್ಡಾಯವಾಗಿ ಸೂಕ್ತ ಪರವಾನಗಿ, ಪಶುವೈದ್ಯಕೀಯ ಪ್ರಮಾಣಪತ್ರ ಹಾಗೂ ಕಾನೂನುಬದ್ಧ ದಾಖಲೆಗಳನ್ನು ಹೊಂದಿರಬೇಕು.
ಅನಧಿಕೃತ ಕಸಾಯಿಖಾನೆಗಳು, ಶಂಕಿತ ಗೋದಾಮುಗಳು ಹಾಗೂ ಖಾಸಗಿ ಜಾಗಗಳ ಮೇಲೆ ದಾಳಿ ನಡೆಸಿ ಅಕ್ರಮ ಗೋಹಂತಕರನ್ನು ಬಂಧಿಸಬೇಕು.
ಜಿಲ್ಲಾದ್ಯಂತ ಗೋಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು.
ಒಂದು ವೇಳೆ ಜಿಲ್ಲೆಯ ಯಾವುದೇ ಭಾಗದಲ್ಲಿ ಗೋಹತ್ಯೆ ನಡೆದರೆ ಕಸಾಯಿಖಾನೆಗಳ ವಿರುದ್ಧ ಹಾಗೂ ಜಿಲ್ಲಾಡಳಿತದ ಮಂದಗತಿಯ ಧೋರಣೆಯ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಸಿದೆ. ಈ ಸಂದರ್ಭದಲ್ಲಿ ಶ್ರೀ ರಾಮ ಸೇನೆಯ ಮುಖಂಡರಾದ ವಿನಯ ಅಂಗೊಳ್ಳಿ, ಕಾರ್ಯದರ್ಶಿಗಳು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.



