May 29, 2026
Friday, May 29, 2026
spot_img

ಬೆಳಕೋಣಿ ಬಾಲಕಿ ಸಾವು ಪ್ರಕರಣ: ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದ ವಿಪಕ್ಷ ನಾಯಕ ಛಲವಾದಿ

ಹೊಸದಿಗಂತ ಬೀದರ್:

ಕಮಲನಗರ ತಾಲ್ಲೂಕಿನ ಬೆಳಕೋಣಿ (ಭೋ) ಗ್ರಾಮದಲ್ಲಿ ಇತ್ತೀಚೆಗೆ ನಡೆದ ಬಾಲಕಿಯ ದಾರುಣ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಮೇ 28ರಂದು ಮೃತ ಬಾಲಕಿಯ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಅಧಿಕಾರಿಗಳ ವಿಳಂಬ ನೀತಿಗೆ ವಿಪಕ್ಷ ನಾಯಕರ ಆಕ್ರೋಶ:

ನೊಂದ ಕುಟುಂಬದ ಅಹವಾಲುಗಳನ್ನು ಆಲಿಸಿದ ಛಲವಾದಿ ನಾರಾಯಣಸ್ವಾಮಿ ಅವರು, ಸ್ಥಳದಲ್ಲಿದ್ದ ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳಿಂದ ಘಟನೆಯ ಸಂಪೂರ್ಣ ವಿವರಣೆ ಪಡೆದರು. ಬಳಿಕ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರು. “ದುರಂತ ನಡೆದು ಸುಮಾರು 20 ದಿನಗಳು ಕಳೆದರೂ ಅತ್ಯಂತ ಬಡ ಕುಟುಂಬಕ್ಕೆ ಇನ್ನು ಪರಿಹಾರ ತಲುಪಿಲ್ಲ ಏಕೆ? ತಕ್ಷಣವೇ ಅಗತ್ಯ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಿ” ಎಂದು ಅಧಿಕಾರಿಗಳಿಗೆ ಕಡಕ್ ನಿರ್ದೇಶನ ನೀಡಿದರು.

“ಕುಟುಂಬಕ್ಕೆ ನ್ಯಾಯ ಸಿಗಲೇಬೇಕು” – ಛಲವಾದಿ ನಾರಾಯಣಸ್ವಾಮಿ:

“ಪ್ರಕರಣದ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಬಡ ಕುಟುಂಬಕ್ಕೆ ನ್ಯಾಯ ಒದಗಿಸಲು ನಾನು ಜಿಲ್ಲಾಧಿಕಾರಿಗಳೊಂದಿಗೂ ಮಾತನಾಡುತ್ತೇನೆ. ಸಮಾಜ ಕಲ್ಯಾಣ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸುವಂತೆ ಮಾಡುತ್ತೇನೆ” ಎಂದು ವಿಪಕ್ಷ ನಾಯಕರು ಮಾಧ್ಯಮಗಳಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪ್ರಭು ಬಿ. ಚವ್ಹಾಣ್, “ಮೃತ ವಿದ್ಯಾರ್ಥಿನಿ ಅತ್ಯಂತ ಪ್ರತಿಭಾವಂತೆಯಾಗಿದ್ದು, ಕುಸ್ತಿ ಕ್ಷೇತ್ರದಲ್ಲಿ ರಾಜ್ಯ ಮಟ್ಟದವರೆಗೆ ಸ್ಪರ್ಧಿಸಿ ಸಾಧನೆ ಮಾಡಿದ್ದಳು. ಅವಳಿಗೆ ನಾನು ಸದಾ ಪ್ರೋತ್ಸಾಹ ನೀಡುತ್ತಿದ್ದೆ. ಇಂತಹ ದುರ್ಘಟನೆಗಳು ಮರುಕಳಿಸಬಾರದು. ದುಃಖದ ಈ ಸಮಯದಲ್ಲಿ ನಾನು ಸದಾ ಕುಟುಂಬದೊಂದಿಗಿರುತ್ತೇನೆ, ಯಾರೂ ಧೈರ್ಯ ಕಳೆದುಕೊಳ್ಳಬಾರದು” ಎಂದು ಕಣ್ಣೀರು ಒರೆಸಿದರು.

ಪ್ರಮುಖ ನಾಯಕರ ಭೇಟಿ:

ಈ ಸಂದರ್ಭದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಮಾಜಿ ಶಾಸಕರಾದ ಪ್ರಕಾಶ್ ಖಂಡ್ರೆ, ಕಮಲನಗರ ತಹಸೀಲ್ದಾರ್ ಅಮಿತ್ ಕುಲಕರ್ಣಿ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !