Friday, March 1, 2024

ಹೊಸ ದಾಖಲೆ ಬರೆದ ಬೆಳಗಾವಿ ವಿಮಾನ ನಿಲ್ದಾಣ – ಪ್ರಯಾಣಿಕರ ಸಂಖ್ಯೆಯಲ್ಲಿ ಕ್ಷಿಪ್ರ ಪ್ರಗತಿ

  • ರಾಮಚಂದ್ರ ಬಿ.ಸುಣಗಾರ

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದ ಮುಡಿಗೆ ಮತ್ತೊಂದು ಗರಿ ಮೂಡಿದೆ. ಅಲ್ಲದೇ, ಹೊಸ ದಾಖಲೆಯನ್ನೂ ಬರೆದಿದ್ದು, ನಗರದ ಉದ್ಯಮಿಗಳು, ಗಣ್ಯರು ಹಾಗೂ ನಾಗರಿಕರ ಸಂತಸಕ್ಕೆ ಕಾರಣವಾಗಿದೆ.

ಕಳೆದ ನವೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆಯಲ್ಲಿ ರಾಜ್ಯದ ವಿಮಾನ ನಿಲ್ದಾಣಗಳ ಪೈಕಿ ಮೊದಲ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಉತ್ತರ ಕರ್ನಾಟಕ ಸೇರಿದಂತೆ ದಕ್ಷಿಣ ಮಹಾರಾಷ್ಟ್ರದ ಪ್ರಯಾಣಿಕರೂ ಹೆಚ್ಚು ಅವಲಂಬಿಸಿರುವುದು ಬೆಳಗಾವಿ ವಿಮಾನ ನಿಲ್ದಾಣ ಎಂಬುದು ಇಲ್ಲಿ ವಿಶೇಷ.

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕ ಬೆಸೆಯುವ ಪ್ರಮುಖ ಕೊಂಡಿಯಾಗಿರುವ ನಗರದ ವಿಮಾನ ನಿಲ್ದಾಣ ಮೂಲಕ ದಿನಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಉದ್ಯಮಿಗಳು, ರಾಜಕಾರಣಿಗಳು ಓಡಾಡುತ್ತಾರೆ. ಆದರೆ, ಕಳೆದ ವರ್ಷ ದೆಹಲಿ ಸೇರಿದಂತೆ ದೇಶದ ವಿವಿಧ ನಗರಗಳಿಗೆ ಬೆಳಗಾವಿಯಿಂದ ವಿಮಾನ ಸಂಚಾರ ಏಕಾಏಕಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿ, ಸಾಕಷ್ಟು ಟೀಕೆಗಳು ಕೂಡ ಕೇಳಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಈಗ ಮತ್ತೆ ಬೆಳಗಾವಿ-ದೆಹಲಿ ಮಧ್ಯ ಪ್ರತಿದಿನ ವಿಮಾನ ಸಂಚಾರ ಪುನಾರಂಭಗೊಂಡಿದೆ. ಜೊತೆಗೆ ಬೆಳಗಾವಿ-ಬೆಂಗಳೂರು ನಡುವೆ ಸಂಚಾರ ಕೈಗೊಳ್ಳುವ ವಿಮಾನಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಕಾರಣದಿಂದ ನವೆಂಬರ್ ತಿಂಗಳಲ್ಲಿ ರಾಜ್ಯದ ಡೊಮೆಸ್ಟಿಕ್ ವಿಮಾನ ನಿಲ್ದಾಣಗಳ ಪೈಕಿ ಅತಿ ಹೆಚ್ಚು ಜನ ಪ್ರಯಾಣ ಮಾಡಿದ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಈ ನಿಲ್ದಾಣ ಪಾತ್ರವಾಗಿದೆ. ಇನ್ನು ರಾಜ್ಯದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾದ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳ ಬಳಿಕ ಬೆಳಗಾವಿ ವಿಮಾನ ನಿಲ್ದಾಣ ಮೂರನೇ ಸ್ಥಾನದಲ್ಲಿರುವುದು ವಿಶೇಷ.‌

ದಾಖಲೆಯ ಪ್ರಯಾಣ
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಂಕಿ ಅಂಶಗಳ ಪ್ರಕಾರ ಕಳೆದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ನವೆಂಬರ್ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.9.47ರಷ್ಟು ಹೆಚ್ಚಳವಾಗಿದ್ದು, ನವೆಂಬರ್‌ನಲ್ಲಿ ಬೆಳಗಾವಿಯಿಂದ 531 ವಿಮಾನಗಳಲ್ಲಿ ಒಟ್ಟು 32,059 ಜನ ಪ್ರಯಾಣಿಸಿರುವುದು ದಾಖಲೆಯಾಗಿದೆ.

ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ಅಹಮದಾಬಾದ್, ಸೂರತ್, ನಾಗಪುರ, ತಿರುಪತಿ, ಜೋಧಪುರ ಸೇರಿದಂತೆ ದೇಶದ 10 ನಗರಗಳಿಗೆ ನೇರ ವಿಮಾನ ಸಂಚಾರವಿದ್ದು, ಬೆಳಗಾವಿ-ಬೆಂಗಳೂರು ನಡುವೆ ಮೆಸ್ಟಿಕ್ ಹೆಚ್ಚುವರಿ ವಿಮಾನಗಳು ಹಾಗೂ ಬೆಳಗಾವಿ-ಪುಣೆ ನಡುವೆ ಹೊಸದಾಗಿ ವಿಮಾನ ಸಂಚಾರ ಪ್ರಾರಂಭವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!