May 19, 2026
Tuesday, May 19, 2026
spot_img

ಬೆಳಗಾವಿ ಕರ್ನಾಟಕದ ಭಾಗವೇ, ಪ್ರತ್ಯೇಕ ನಿರ್ಣಯದ ಅಗತ್ಯವೇನು?: ಎನ್. ರವಿಕುಮಾರ್ ಪ್ರಶ್ನೆ

ಹೊಸದಿಗಂತ ವರದಿ, ಬೆಳಗಾವಿ:

ಬೆಳಗಾವಿ ಈಗಾಗಲೇ ಕರ್ನಾಟಕದ ಭಾಗವಾಗಿದೆ. ಮುಂದೆಯೂ ಕರ್ನಾಟಕದಲ್ಲೇ ಉಳಿಯಲಿದೆ. ಅದಕ್ಕಾಗಿ ಪ್ರತ್ಯೇಕ ನಿರ್ಣಯ ಅಂಗೀಕರಿಸುವ ಅಗತ್ಯವೇನು? ಅಗತ್ಯವಿದ್ದರೆ ಮಾತ್ರ ನಿರ್ಣಯ ಅಂಗೀಕರಿಸಲಾಗುವುದು” ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕರಾದ ಎನ್. ರವಿಕುಮಾರ್ ಹೇಳಿದ್ದಾರೆ.

ಅವರ ಈ ಹೇಳಿಕೆ ಬೆಳಗಾವಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಡಳಿತಾರೂಢ ಬಿಜೆಪಿ ವತಿಯಿಂದ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ಒಂದು ಸಾಲಿನ ನಿರ್ಣಯ ಅಂಗೀಕರಿಸಬೇಕು ಎಂದು ವಿವಿಧ ಕನ್ನಡಪರ ಸಂಘಟನೆಗಳು ಒತ್ತಾಯಿಸುತ್ತಿವೆ.

ಬೆಳಗಾವಿ ಕರ್ನಾಟಕದಲ್ಲಿದೆ

ಈ ಬೇಡಿಕೆ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಎನ್. ರವಿಕುಮಾರ್, ನಿರ್ಣಯದ ಅಗತ್ಯತೆಯನ್ನೇ ಪ್ರಶ್ನಿಸಿದರು. “ಬೆಳಗಾವಿ ಕರ್ನಾಟಕದಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದು ಮುಂದೆಯೂ ಕರ್ನಾಟಕದಲ್ಲೇ ಇರುತ್ತದೆ. ಈಗ ಪ್ರತ್ಯೇಕವಾಗಿ ನಿರ್ಣಯ ಅಂಗೀಕರಿಸುವಂತಹ ಸಂದರ್ಭ ಬಂದಿದೆಯೇ ಎಂಬುದನ್ನು ಪರಿಶೀಲಿಸಬೇಕು” ಎಂದು ಹೇಳಿದರು.

ಪಾಲಿಕೆಯ ನಿರ್ಧಾರದತ್ತ ಸಂಘಟನೆಗಳ ದೃಷ್ಟಿ

ಇದಕ್ಕೆ ವಿರುದ್ಧವಾಗಿ ಕನ್ನಡಪರ ಸಂಘಟನೆಗಳು ಈ ವಿಷಯವನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಗಣಿಸಿವೆ. ಮೇಯರ್ ಹಾಗೂ ಉಪಮೇಯರ್ ಇಬ್ಬರೂ ಕನ್ನಡ ಭಾಷಿಕರಾಗಿರುವ ಸಂದರ್ಭದಲ್ಲಿ ಪಾಲಿಕೆಯಿಂದ ಸ್ಪಷ್ಟ ಸಂದೇಶ ಹೊರಬರಬೇಕು ಎಂಬುದು ಸಂಘಟನೆಗಳ ವಾದವಾಗಿದೆ.

ಈ ಸಂಬಂಧ ಕನ್ನಡಪರ ಸಂಘಟನೆಗಳ ಮುಖಂಡರು ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ಎನ್. ರವಿಕುಮಾರ್ ಅವರ ಅಗತ್ಯವಿದ್ದರೆ ಮಾತ್ರ ನಿರ್ಣಯ” ಎಂಬ ಹೇಳಿಕೆ ಕನ್ನಡ ಸಂಘಟನೆಗಳ ಮುಂದಿನ ಹೋರಾಟಕ್ಕೆ ವೇದಿಕೆ ಸೃಷ್ಟಿಸುವ ಸಾಧ್ಯತೆ ಇದೆ. ಬೆಳಗಾವಿ ಗಡಿವಿವಾದದ ಸೂಕ್ಷ್ಮ ಹಿನ್ನೆಲೆಯ ನಡುವೆ, ಪಾಲಿಕೆಯ ಒಂದು ಸಾಲಿನ ನಿರ್ಣಯವೇ ಈಗ ರಾಜಕೀಯವಾಗಿ ಮಹತ್ವದ ಸಂದೇಶವಾಗಿ ಪರಿಣಮಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !