ಹೊಸದಿಗಂತ ವರದಿ, ಬೆಳಗಾವಿ:
ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶ ನಡೆಸುವುದಕ್ಕಿಂತ ಮೊದಲು ಜನರ ಸಮಸ್ಯೆಗಳಿಗೆ ಉತ್ತರ ನೀಡಬೇಕು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮಂಗಳವಾರ ನಗರದ ಸರ್ಕಿಟ್ ಸೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರಿನಲ್ಲಿ ಕಾಂಗ್ರೆಸ್ ಆಯೋಜಿಸಿರುವ ‘ಸಾಧನಾ ಸಮಾವೇಶ’ವನ್ನು ಟೀಕಿಸಿದರು.
ಸಚಿವರು ಜಿಲ್ಲೆಗಳಲ್ಲೇ ಕಾಣಿಸುತ್ತಿಲ್ಲ
ರಾಜ್ಯದಲ್ಲಿ ಯಾವ ಸಾಧನೆ ಮಾಡಲಾಗಿದೆ ಎಂಬುದನ್ನು ಮೊದಲು ಜನರಿಗೆ ತಿಳಿಸಲಿ. ಅಕಾಲಿಕ ಮಳೆಯಿಂದ ಅನೇಕ ಜಿಲ್ಲೆಗಳಲ್ಲಿ ರೈತರ ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿವೆ. ಜನರು ಸಂಕಷ್ಟದಲ್ಲಿದ್ದರೂ ಸಚಿವರು ಜಿಲ್ಲೆಗಳಲ್ಲೇ ಕಾಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾಹೀರಾತು ನೀಡಬೇಕಾದ ಪರಿಸ್ಥಿತಿ ನಿರ್ಮಾಣ
ಯಾವ ಜಿಲ್ಲಾ ಉಸ್ತುವಾರಿ ಸಚಿವರು ಯಾವ ಜಿಲ್ಲೆಯಲ್ಲಿ ಇದ್ದಾರೆ ಎಂಬುದೇ ಜನರಿಗೆ ಗೊತ್ತಾಗುತ್ತಿಲ್ಲ. ಕೆಲವರು ಕೇರಳದಲ್ಲಿದ್ದಾರೆ, ಕೆಲವರು ದೆಹಲಿಯಲ್ಲಿ ತಿರುಗುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ಹುಡುಕಿಕೊಡಿ ಎಂದು ಜಾಹೀರಾತು ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಶಾಸಕರು ಮತ್ತು ಸಚಿವರು ಜನರ ಮಧ್ಯೆ ಹೋಗಿ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿಲ್ಲ. ಶಾಸಕರಿಗೂ ಕ್ಷೇತ್ರಾಭಿವೃದ್ಧಿಗೆ ಬೇಕಾದಷ್ಟು ಅನುದಾನ ಬಿಡುಗಡೆ ಮಾಡುತ್ತಿಲ್ಲ. ಆಡಳಿತ ಯಂತ್ರವೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದರು.
ಮಕ್ಕಳ ಸುರಕ್ಷತೆಯಲ್ಲೂ ನಿರ್ಲಕ್ಷ್ಯ
ಸರ್ಕಾರಿ ಶಾಲೆಗಳ ದುಸ್ಥಿತಿಯನ್ನೂ ಉಲ್ಲೇಖಿಸಿದ ಅವರು, “ಸುಮಾರು ಐದು ಸಾವಿರ ಶಾಲಾ ಕಟ್ಟಡಗಳು ಬೀಳುವ ಹಂತದಲ್ಲಿವೆ. ಬೇಸಿಗೆ ರಜೆಯ ಅವಧಿಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಬೇಕಿತ್ತು. ಆದರೆ ಸರ್ಕಾರ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ. ಮಕ್ಕಳ ಸುರಕ್ಷತೆಯ ವಿಷಯದಲ್ಲೂ ಸರ್ಕಾರ ನಿರ್ಲಕ್ಷ್ಯ ತೋರಿದೆ” ಎಂದು ದೂರಿದರು.
ರಸ್ತೆಗಳಲ್ಲಿ ಸಾವಿರಾರು ಗುಂಡಿಗಳು
ರಸ್ತೆಗಳ ದುಸ್ಥಿತಿ ಕುರಿತು ಮಾತನಾಡಿದ ಅವರು, ರಾಜ್ಯದ ಅನೇಕ ರಸ್ತೆಗಳು ಸಾವಿರಾರು ಗುಂಡಿಗಳಿಂದ ತುಂಬಿವೆ. ಜನರು ಪ್ರತಿದಿನ ಸಂಚಾರಕ್ಕೆ ಪರದಾಡುತ್ತಿದ್ದಾರೆ. ಮಳೆ ಬಂದರೆ ರಸ್ತೆಗಳ ಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಆದರೂ ಸರ್ಕಾರಕ್ಕೆ ಜನರ ಕಷ್ಟ ಕಾಣಿಸುತ್ತಿಲ್ಲ ಎಂದು ಟೀಕಿಸಿದರು.
ಸಿಎಂ -ಡಿಸಿಎಂ ನಡುವೆ ಖುರ್ಚಿ ಗುದ್ದಾಟ
ಕೈಗಾರಿಕೆಗಳ ವಿಚಾರದಲ್ಲಿಯೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, “ಬೆಂಗಳೂರು ಹೊರತುಪಡಿಸಿ ಇತರೆ ನಗರಗಳನ್ನು ಭವಿಷ್ಯದ ನಗರಗಳನ್ನಾಗಿ ಅಭಿವೃದ್ಧಿಪಡಿಸಬೇಕಿತ್ತು. ಆದರೆ ಸರ್ಕಾರದ ಒಳಜಗಳ, ಮುಖ್ಯಮಂತ್ರಿ–ಉಪ ಮುಖ್ಯಮಂತ್ರಿ ಖುರ್ಚಿ ಗುದ್ದಾಟದಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಅನೇಕ ಕೈಗಾರಿಕೆಗಳು ಬೆಂಗಳೂರನ್ನು ಬಿಟ್ಟು ಹೊರ ಹೋಗುತ್ತಿವೆ” ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇಬ್ಬರೂ ಖುರ್ಚಿ ಗುದ್ದಾಟದಲ್ಲೇ ನಿರತರಾಗಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಅವರಿಗೆ ಚಿಂತೆಯೇ ಇಲ್ಲ. ಹಕ್ಕುಪತ್ರ ವಿತರಿಸುವ ಮೊದಲು ಸರ್ಕಾರ ತನ್ನ ಕರ್ತವ್ಯ ಪತ್ರವನ್ನು ಸರಿಪಡಿಸಿಕೊಳ್ಳಬೇಕು” ಎಂದು ಚಾಟಿ ಬೀಸಿದರು.
ಬೆಳಗಾವಿಯಲ್ಲಿ ಇಬ್ಬರು ಸಚಿವರು ಇದ್ದರೂ ಸಮಸ್ಯೆ ಬಗೆಹರಿದಿಲ್ಲ
ಬೆಳಗಾವಿಯ ಅಭಿವೃದ್ಧಿ ಕುರಿತೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಬೆಳಗಾವಿಯಲ್ಲಿ ಇಬ್ಬರು ಪ್ರಭಾವಿ ಸಚಿವರು ಇದ್ದರೂ ನಗರದ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಚಳಿಗಾಲ ಅಧಿವೇಶನ ನಡೆಸುವುದಾದರೆ ಬೆಳಗಾವಿಯ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು. ಕೇವಲ ಮನವಿ ಸ್ವೀಕರಿಸಲು ಮಾತ್ರ ಅಧಿವೇಶನ ನಡೆಸಬಾರದು ಎಂದರು.
ಕೆಎಸ್‌ಆರ್‌ಟಿಸಿ ನೌಕರರ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ತಕ್ಷಣ ಸಮಸ್ಯೆ ಬಗೆಹರಿಸುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಇಂದಿಗೂ ನೌಕರರ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಬಸ್‌ಗಳ ಸ್ಥಿತಿ ಹೇಳತೀರದಂತಾಗಿದೆ. ನೌಕರರ ಗೋಳು ಕೇಳುವವರೇ ಇಲ್ಲ, ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಶಾಸಕ ಸಂಜಯ ಪಾಟೀಲ, ಡಿ.ಎಸ್. ಅರುಣ, ಭಾರತಿ ಮಗದುಮ್, ಮುರುಘೇಂದ್ರಗೌಡ ಪಾಟೀಲ, ಸಿದ್ದನಗೌಡ ಪಾಟೀಲ,ಸೇರಿದಂತೆ ಹಲವರು ಉಪಸ್ಥಿತರಿದ್ದರು.



