July 23, 2026
Thursday, July 23, 2026
spot_img

ಬೆಳಗಾವಿ | ದಾರಿ ವಿವಾದ ಕೊಲೆಯಲ್ಲಿ ಅಂತ್ಯ: 24 ಗಂಟೆಯಲ್ಲಿ ಆರೋಪಿ ಅಂದರ್

ಹೊಸದಿಗಂತ ವರದಿ,ಬೆಳಗಾವಿ:

ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡದ ಗ್ರಾಮದಲ್ಲಿ ಕ್ಷುಲ್ಲಕ ದಾರಿ ವಿವಾದಕ್ಕೆ ಸಂಬಂಧಿಯನ್ನು ಕೊಂದಿದ್ದ ಆರೋಪಿಯನ್ನು ಪೊಲೀಸರು, 24 ಗಂಟೆಯಲ್ಲೇ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಜೈಲಿಗೆ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೈಲಹೊಂಗಲ ತಾಲೂಖಿನ ದೊಡವಾಡ ಗ್ರಾಮದ ಕೊಪ್ಪ ಅಗಸಿಯ ನಿವಾಸಿ ಮಹೇಶ ಬಸಯ್ಯ ಉಪ್ಪನಿಮಠ ಎಂಬುವವರ ಭೀಕರ ಹತ್ಯೆ ಪ್ರಕರಣವನ್ನು ದೊಡವಾಡ ಪೊಲೀಸರು ಕೇವಲ ಒಂದೇ ದಿನದಲ್ಲಿ ಕೊಲೆ ಆರೋಫಿಯನ್ನು ಪತ್ತೆ ಹಚ್ಚಿದ್ದಾರೆ.

ಮೃತನ ಸಂಬಂಧಿ ರುದ್ರಯ್ಯ ಬಸಯ್ಯ ಉಪ್ಪನಿಮಠ (36) ಎಂಬಾತ ಕೃತ್ಯ ಎಸಗಿದವ. ಮನೆಯ ಮುಂದಿನ ದಾರಿ ವಿವಾದ ಹಾಗೂ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ. ಮಾರ್ಚ್ 17 ರಂದು ಸಂಜೆ ಏಕಾಏಕಿ ಕುಡುಗೋಲಿನಿಂದ ಮಹೇಶನ ಕುತ್ತಿಗೆಗೆ ಇರಿದು ರಕ್ತದ ಮಡುವಿನಲ್ಲಿ ಕೆಡವಿದ್ದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ, ಈ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು, ತನಿಖೆ ಚುರುಕುಗೊಳಿಸಿ, ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಮೊದಲಿನಿಂದಲೂ ದಾರಿ ವಿಚಾರವಾಗಿ ಮೃತನೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಘಟನೆಯ ದಿನ ಚಿಕನ್ ಅಂಗಡಿ ಬಳಿ ನಡೆದ ಗಲಾಟೆಯಲ್ಲಿ ಮೃತ ಮಹೇಶ ಬುದ್ಧಿವಾದ ಹೇಳಿದ್ದಕ್ಕೆ ಕೆರಳಿದ ಆರೋಪಿ, ನನ್ನ ಮೇಲೆಯೇ ಹಿರೇತನ ತೋರಿಸುತ್ತೀಯಾ ಎಂದು ಆಕ್ರೋಶಗೊಂಡು ಹೊಂಚು ಹಾಕಿ ಈ ಕೃತ್ಯ ಎಸಗಿದ್ದಾನೆ ಎಂಬುವುದು ತಿಳಿದು ಬಂದಿದೆ.

ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಶಿವಾನಂದ ಗುಡಗನಟ್ಟಿ ಹಾಗೂ ಪಿಎಸ್ಐ ಹೆಚ್.ಕೆ. ಪಾಟೀಲ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಪೊಲೀಸ್ ತಂಡಕ್ಕೆ ಶ್ಲಾಘನೀಯ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !