ಡಿಕೆ ಶಿವಕುಮಾರ್​ಗೆ ಟಕ್ಕರ್ ಕೊಟ್ಟ ಬೆಳಗಾವಿ ಸಾಹುಕಾರ: 2028ಕ್ಕೆ ಸಿಎಂ ಆಗುವ ಪ್ಲಾನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಶುರುವಾಗಿದ್ದು, ಸಿದ್ದರಾಮಯ್ಯ ರಾಜೀನಾಮೆ ಕೊಟ್ರೆ ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎನ್ನುವ ಅಭಿಯಾನ ಶುರುವಾಗಿದೆ.

ಈ ಬಗ್ಗೆ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಬೆಳಗಾವಿ ಸಾಹುಕಾರ ಇತ್ತೀಚೆಗೆ ರಾಹುಲ್ ಗಾಂಧಿ ಭೇಟಿಯಾಗಿದ್ದು, ಸಿಎಂ ಬದಲಾದ್ರೆ ಜಾರಕಿಹೊಳಿಗೆ ಚಾನ್ಸ್ ಸಿಗುತ್ತಾ ಎಂಬ ಚರ್ಚೆ ನಡೆಯುತ್ತಿದೆ. ಈ ನಡುವೆ ಜಾರಕಿಹೊಳಿ ಸಿಎಂ ಪಟ್ಟದ ಕುರಿತ ಚರ್ಚೆಗಳನ್ನ ತಳ್ಳಿಹಾಕಿದ್ದಾರೆ. ಇದರ ಜತೆಗೆ ಸಚಿವ ಎಂ.ಬಿ ಪಾಟೀಲ್ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.

ಸತೀಶ್ ಜಾರಕಿಹೊಳಿ‌ಗಿಂತ ನಾನು ಸಿನಿಯರ್ ಇದೀನಿ ಎಂಬ ಎಂಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಾರಕಿಹೊಳಿ, ಸಿಎಂ ಸಿದ್ದರಾಮಯ್ಯ ಇದ್ದಾರೆ ಅವರೇ ಮುಂದುವರೆಯುತ್ತಾರೆ. ನಾವೆಲ್ಲೂ ಸಿಎಂ ಸ್ಥಾನವನ್ನು ಕ್ಲೆಮ್ ಮಾಡಿಲ್ಲ. ಇದರಲ್ಲಿ ಗುದ್ದಾಟ, ಕುಸ್ತಿ ಮಾಡೋ ಅವಶ್ಯಕತೆ ಇಲ್ಲ. ಅನೇಕರು ಈಗಾಗಲೇ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಎಂಪಿ ಪಾಟೀಲ್​ಗೆ ತಿರುಗೇಟು ನೀಡಿದರು

ಇನ್ನು ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ ಎಂದಿರುವ ಸತೀಶ್ ಜಾರಕಿಹೊಳಿ, 2028ಕ್ಕೆ ಸಿಎಂ ಆಗುವ ತಯಾರಿ ಇದೆ ನಮ್ಮದು. ಅಲ್ಲಿಯವರೆಗೆ ಅಭಿಮಾನಿಗಳು ಕಾಯಬೇಕು. ನಾನು ಸಿಎಂ ಆಗುವ ವಿಚಾರದ ಬಗ್ಗೆ ಮುಂದೆ ನೋಡೋಣ. 2028ಕ್ಕೆ ಈ ವಿಚಾರದ ಬಗ್ಗೆ ನೋಡೋಣ.​​ ಸದ್ಯ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತಾರೆ. ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯುವ ನಂಬಿಕೆ ಇದೆ. ಆರ್​​.ವಿ.ದೇಶಪಾಂಡೆ, ಪರಮೇಶ್ವರ್​​, ಡಿ.ಕೆ.ಶಿವಕುಮಾರ್​. ಎಂ.ಬಿ.ಪಾಟೀಲ್​, ಶಿವಾನಂದ ಪಾಟೀಲ್​ ಹಿರಿಯರಿದ್ದಾರೆ. ಎಲ್ಲರಿಗೂ ಮುಖ್ಯಮಂತ್ರಿ ಆಗುವ ಅಸೆ ಇದ್ದೇ ಇರುತ್ತೆ. ಸದ್ಯ ಈ ಪ್ರಶ್ನೆ ಉದ್ಭವಿಸುವುದಿಲ್ಲ ಮುಂದೇನುಗುತ್ತೆ ನೋಡೋಣ ಎಂದು ಹೇಳಿದರು.

ಈಗ ಸಿಎಂ ಕನಸು ಕಂಡಿಲ್ಲ. ಈಗಾಗಲೇ ಸಿಎಂ ಸಿದ್ದರಾಮಯ್ಯಗೆ ಬೆಂಬಲ ನೀಡಿದ್ದೇನೆ. ಯಾವುದೋ ಸಂದರ್ಭದಲ್ಲಿ ಹೇಳಿಕೆ ಕೊಟ್ಟಿರುತ್ತಾರೆ. ಎಲ್ಲಿಯೂ ನಾನೇ ಸಿಎಂ ಆಗ್ತೇನಿ ಅಂತಾ ಯಾರು ಹೇಳಿಲ್ಲ. ಈ ರೀತಿ ಹೇಳಿಕೆ ಎಪೇಕ್ಟ್ ಆಗುವುದಿಲ್ಲ. 2028ಕ್ಕೆ ಸಿಎಂ ಆಗುವ ತಯಾರಿ ಇದೆ ನಮ್ಮದು. ಅಲ್ಲಿಯವರೆಗೆ ಅಭಿಮಾನಿಗಳು ಕಾಯಬೇಕು ಎಂದು ತಮ್ಮ ಮನದಾಳದ ಮಾತು ಹೊರಹಾಕಿದ್ದಾರೆ.

ಈಗಾಗಲೇ ಡಿಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ನಡುವೆ ಕೆಲ ವಿಷಯಕ್ಕೆ ಮುಸುಕಿನ ಗುದ್ದಾಟ ಇತ್ತು. ಇದರ ಮಧ್ಯ ಇದೀಗ ಸತೀಶ್ ಜಾರಕಿಹೊಳಿ 2028ಕ್ಕೆ ಸಿಎಂ ಆಗುವ ತಯಾರಿ ನಮ್ಮದು ಎಂದಿದ್ದಾರೆ. ಈ ಮೂಲಕ ಮುಂದಿನ ಸಲ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎನ್ನುವ ಸಂದೇಶವನ್ನು ಕಾಂಗ್ರೆಸ್​ ನಾಯಕರಿಗೆ ಜಾರಕಿಹೊಳಿ ರವಾನಿಸಿದ್ದಾರೆ. ಈ ಮೂಲಕ ಮುಂದಿನ ಸಿಎಂ ರೇಸ್​ನಲ್ಲಿರುವ ಉಪಮುಖ್ಯಂತ್ರಿ ಡಿಕೆ ಶಿವಕುಮಾರ್​ಗೆ ಟಕ್ಕರ್ ಕೊಟ್ಟಿದ್ದಾರೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!