ಹೊಸದಿಗಂತ ಬೆಳಗಾವಿ:
ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಯು ಕೇವಲ ಆಕಸ್ಮಿಕವಲ್ಲ, ಅದು ದ್ವೇಷದ ಮತ್ತು ಅಸೂಯೆಯ ರಾಜಕೀಯಕ್ಕೆ ಸಂದ ಬಲಿ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸತ್ಯ ಸಂಶೋಧನಾ ಸಮಿತಿಯ ತನಿಖೆಯ ವೇಳೆ ಹೊರಬಂದ ಮಹತ್ವದ ಅಂಶಗಳನ್ನು ಹಂಚಿಕೊಂಡರು.
ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯಕ್ರಮದ ಬ್ಯಾನರ್ ಹಚ್ಚುವ ವಿಚಾರದಲ್ಲಿ ಶುರುವಾದ ಸಣ್ಣ ಘರ್ಷಣೆ ಹತ್ಯೆಯಲ್ಲಿ ಅಂತ್ಯವಾಗಿದೆ.
ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರು ಖಾಸಗಿ ಗನ್‌ಮ್ಯಾನ್‌ಗಳನ್ನು ಇಟ್ಟುಕೊಂಡಿರುವುದರ ಅಗತ್ಯವೇನಿತ್ತು? ಉದ್ದೇಶಪೂರ್ವಕವಾಗಿಯೇ ಗಲಾಟೆ ಸೃಷ್ಟಿಸಲಾಗಿದೆ ಎಂಬ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ ಎಂದು ರೇವಣ್ಣ ತಿಳಿಸಿದರು.
ಗುಂಡು ಹಾರಿಸಿದ್ದು ಯಾರು ಮತ್ತು ಘಟನೆಯ ನಿಖರ ಕಾರಣವೇನು ಎಂಬುದು ಎಫ್‌ಎಸ್‌ಎಲ್ (FSL) ವರದಿಯಿಂದ ಶೀಘ್ರವೇ ಸ್ಪಷ್ಟವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರು ಈ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಪ್ರಕರಣದ ಕುರಿತು ಈಗಾಗಲೇ ಪೊಲೀಸ್ ತನಿಖೆ ಚುರುಕಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ವದಂತಿ ಹಾಗೂ ಗ್ಯಾರಂಟಿ ಯೋಜನೆ
ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿಗಳು. ಹಾವೇರಿಯಲ್ಲಿ ಅವರು ನೀಡಿದ ಹೇಳಿಕೆಯ ಬಗ್ಗೆ ಅವರನ್ನೇ ಕೇಳುವುದು ಸೂಕ್ತ. ಪಕ್ಷದ ಪ್ರತಿಯೊಬ್ಬರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದಾರೆ ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಬಾಕಿ ಹೊರತುಪಡಿಸಿ, ಉಳಿದೆಲ್ಲವೂ ಸುಗಮವಾಗಿವೆ. ಬಿಜೆಪಿ ನಾಯಕರು ಅನಗತ್ಯವಾಗಿ “ಮೊಸರಲ್ಲಿ ಕಲ್ಲು ಹುಡುಕುವ” ಕೆಲಸ ಬಿಡಲಿ ಎಂದು ಕಿಡಿಕಾರಿದರು.


