ಕೋವಿಡ್ ಸಂಕಷ್ಟದಲ್ಲಿನ ಫಲಾನುಭವಿಗಳಿಗೆ ಕೊಡಗು ರೆಡ್‍ಕ್ರಾಸ್’ನಿಂದ ನೆರವು

ದಿಗಂತ ವರದಿ ಮಡಿಕೇರಿ:

ಕೋವಿಡ್-19 ಮೂರನೇ ಅಲೆಯು ಮಾರ್ಚ್ ಅಂತ್ಯದವರೆಗೂ ಇರುವ ಸಾಧ್ಯತೆ ಇದೆ. ಆದ್ದರಿಂದ ಜನರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ, ಸೋಂಕು ತಗುಲದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕರೆ ನೀಡಿದ್ದಾರೆ.

ನಗರದ ಬಾಲಭವನದ ಸಭಾಂಗಣದಲ್ಲಿ ಕೊಡಗು ಜಿಲ್ಲಾ ರೆಡ್‍ಕ್ರಾಸ್ ಘಟಕದ ವತಿಯಿಂದ ಕೋವಿಡ್ ಸಂತ್ರಸ್ತರ ಕುಟುಂಬಗಳಿಗೆ ಹೊಲಿಗೆ ಯಂತ್ರ ಹಾಗೂ ದಿನಸಿ ಕಿಟ್ ವಿತರಿಸಿ ಮಾತನಾಡಿದ ರೆಡ್‍ಕ್ರಾಸ್ ಜಿಲ್ಲಾ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ, ಕೊಡಗಿನಲ್ಲಿ ಕೋವಿಡ್ ಸೋಂಕಿಗೆ ಈವರೆಗೆ 438 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಕೆಲವರು ಮನೆಯಲ್ಲಿಯೇ ಸ್ವಯಂ ಚಿಕಿತ್ಸೆ ಪಡೆದು ಸಾವನ್ನಪ್ಪಿದ್ದಾರೆ. ಅಂತಹ ಪ್ರಕರಣ ಹೊರತುಪಡಿಸಿ ಕೋವಿಡ್’ನಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ 331 ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ 50 ಸಾವಿರ ರೂ. ಹಾಗೂ ರಾಜ್ಯ ಸರ್ಕಾರದಿಂದ 1 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಮನೆಯಲ್ಲಿಯೇ ಚಿಕಿತ್ಸೆ ಪಡೆದು ಸಾವನ್ನಪ್ಪಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆದೇಶಿದ ಹಿನ್ನಲೆಯಲ್ಲಿ ಅಂತಹ ಪ್ರಕರಣಗಳನ್ನೂ ಪರಿಶೀಲಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಕೋವಿಡ್ ಸೋಂಕು ಜಗತ್ತನ್ನೇ ವ್ಯಾಪಿಸಿದ ಬಳಿಕ ಜನಸಮುದಾಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಯಾಗುತ್ತಲೇ ಇದೆ. ಇದೀಗ ಕೋವಿಡ್‍ನ 3ನೇ ಅಲೆ ಪ್ರಾರಂಭವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರವನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಾಯ್ದುಕೊಂಡು ಕೋವಿಡ್ ನಿಯಮಾವಳಿಗಳನ್ನು ಶಿಸ್ತುಬದ್ಧವಾಗಿ ಪಾಲಿಸಬೇಕಾಗಿದೆ ಎಂದರು.

ಪ್ರಸ್ತುತ 15-18 ನೇ ವಯಸ್ಸಿನ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಮಾರ್ಚ್‍ನಿಂದ 12-14 ನೇ ವಯಸ್ಸಿನ ವಿದ್ಯಾರ್ಥಿಗಳಿಗೂ ಲಸಿಕೆ ನೀಡಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಲಸಿಕೆ ಮೂಲಕ ಕೋವಿಡ್ ಸೋಂಕಿನ ತೀವ್ರತೆಯನ್ನು ಕಡಿಮೆಮಾಡುವ ಉದ್ದೇಶ ಆರೋಗ್ಯ ಇಲಾಖೆಯದ್ದಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿ, ಕೋವಿಡ್‍ನಿಂದ ತಂದೆ, ತಾಯಿಯರನ್ನು ಕಳೆದುಕೊಂಡ ಮಕ್ಕಳ ಪೋಷಣೆಯ ಹೊಣೆಯನ್ನು ಸರ್ಕಾರವೇ ವಹಿಸಿಕೊಳ್ಳುತ್ತಿದೆ ಎಂದರು.

ಬಾಲಸ್ನೇಹಿ ಯೋಜನೆ ಮುಖಾಂತರ ಇಂತಹ ಮಕ್ಕಳ ಪಾಲಕರಿಗೆ ಮಾಸಿಕ 3,500 ರೂ. ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ 5 ಮಕ್ಕಳ ಪಾಲಕರಿಗೆ ಈ ಸೌಲಭ್ಯ ದೊರಕಿದೆ. ಈ ಮಕ್ಕಳಿಗೆ 18 ವರ್ಷವಾದ ಕೂಡಲೇ ಕೇಂದ್ರದಿಂದ 10 ಲಕ್ಷ ರಾಜ್ಯ ಸರ್ಕಾರದಿಂದ 1 ಲಕ್ಷ ರು. ನೆರವು ದೊರಕಲಿದೆ. ಇವರ ಶಿಕ್ಷಣದ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಕೊಡಗು ಜಿಲ್ಲಾ ರೆಡ್‍ಕ್ರಾಸ್ ಘಟಕವು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ದಿನಗಳಿಂದ ಈವರೆಗೆ ಸತತವಾಗಿ ಕಾರ್ಯಪ್ರವೃತ್ತವಾಗಿ ಫಲಾನುಭವಿಗಳಿಗೆ ಸೂಕ್ತ ನೆರವು ನೀಡಿ ಶ್ಲಾಘನೆಗೆ ಪಾತ್ರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಯಾವುದೇ ಸಂದರ್ಭದಲ್ಲಿಯೂ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೆಡ್ ಕ್ರಾಸ್ ಜನರ ನೆರವಿಗೆ ಬರುತ್ತದೆ ಎಂದು ಭರವಸೆ ನೀಡಿದರು.

ಕೊಡಗು ರೆಡ್‍ಕ್ರಾಸ್ ಘಟಕದ ಸಭಾಪತಿ ಬಿ.ಕೆ.ರವೀಂದ್ರ ರೈ ಮಾತನಾಡಿ, ಪ್ರಸ್ತುತ ಜಿಲ್ಲೆಯ 16 ಫಲಾನುಭವಿಗಳಿಗೆ ಯಾಂತ್ರಿಕ ಹೊಲಿಗೆ ಯಂತ್ರ, 60 ಫಲಾನುಭವಿಗಳಿಗೆ ಆಹಾರದ ಕಿಟ್ ವಿತರಿಸಲಾಗಿದೆ. ಜಿಲ್ಲೆಯಲ್ಲಿ 3 ವರ್ಷಗಳಿಂದ ರೆಡ್’ಕ್ರಾಸ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ 25 ಸಾವಿರ ಸ್ಯಾನಿಟೈಸರ್, 35 ಸಾವಿರ ಮಾಸ್ಕ್’ಗಳನ್ನು ರೆಡ್ ಕ್ರಾಸ್’ನಿಂದ ಜನತೆಗೆ ವಿತರಿಸಲಾಗಿದೆ. ರೆಡ್‍ಕ್ರಾಸ್‍ನಿಂದ ಹೊಸ ಸಮುದಾಯ ಭವನ ನಿರ್ಮಾಣವಾಗುತ್ತಿದ್ದು ಶೀಘ್ರದಲ್ಲಿಯೇ ಉದ್ಘಾಟನೆಯಾಗಲಿದೆ ಎಂದು ಮಾಹಿತಿ ನೀಡಿದರು.

ರೆಡ್‍ಕ್ರಾಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಮುರಳೀಧರ್, ಜಿಲ್ಲಾ ಉಪಸಭಾಪತಿಗಳಾದ ಅನಿಲ್ ಎಚ್.ಟಿ, ಶ್ಯಾಂಜೊಸೇಫ್, ಯೂತ್ ರೆಡ್ ಕ್ರಾಸ್ ರಾಜ್ಯ ನಿರ್ದೇಶಕ ಪ್ರಸಾದ್ ಗೌಡ ಜಿಲ್ಲಾ ನಿರ್ದೇಶಕ ಎಂ.ಧನಂಜಯ್, ಜಿಲ್ಲಾ ಸದಸ್ಯರಾದ ಶಿಲ್ಪಾ ರೈ, ವಿಕ್ರಂ ಶೆಟ್ಟಿ, ಶರತ್ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಸುಬ್ರಹ್ಮಣ್ಯ ದೇವಾಡಿಗ ಹಾಜರಿದ್ದರು. ಎಂ.ಧನಂಜಯ್ ಸ್ವಾಗತಿಸಿ, ಮುರಳೀಧರ್ ವಂದಿಸಿದರು. ವಿಕ್ರಂಶೆಟ್ಟಿ ನಿರೂಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!