April 29, 2026
Wednesday, April 29, 2026
spot_img

ಬಂಗಾಳ ಚುನಾವಣಾ ಕಣದಲ್ಲಿ ಕಿಚ್ಚು: ಫಾಲ್ಟಾದಲ್ಲಿ ಇವಿಎಂ ಬಟನ್‌ಗೆ ಟೇಪ್, ಮರು ಮತದಾನಕ್ಕೆ ಬಿಜೆಪಿ ಪಟ್ಟು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಹೈವೋಲ್ಟೇಜ್ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಮತದಾನದ ವೇಳೆ ಫಾಲ್ಟಾ ಕ್ಷೇತ್ರದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸುವ ಡೈಮಂಡ್ ಹಾರ್ಬರ್ ಲೋಕಸಭಾ ವ್ಯಾಪ್ತಿಯ ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಮತಯಂತ್ರಗಳಿಗೆ ಟೇಪ್ ಅಂಟಿಸಿ ಅಕ್ರಮ ಎಸಗಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋಗಳ ಪ್ರಕಾರ, ಹಲವು ಮತಗಟ್ಟೆಗಳಲ್ಲಿ ಇವಿಎಂ ಯಂತ್ರದ ಮೇಲಿರುವ ಬಿಜೆಪಿ ಅಭ್ಯರ್ಥಿಯ ಚಿಹ್ನೆಯ ಬಟನ್ ಅನ್ನು ಪ್ಲಾಸ್ಟಿಕ್ ಟೇಪ್‌ನಿಂದ ಮುಚ್ಚಲಾಗಿದೆ. ಇದರಿಂದಾಗಿ ಮತದಾರರು ತಮಗೆ ಇಷ್ಟ ಬಂದ ಅಭ್ಯರ್ಥಿಗೆ ಮತ ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಲಾಗಿದೆ. ಈ ಘಟನೆಯನ್ನು ಬಿಜೆಪಿಯು “ಡೈಮಂಡ್ ಹಾರ್ಬರ್ ಮಾಡೆಲ್” ಅಕ್ರಮ ಎಂದು ಟೀಕಿಸಿದೆ.

ಸ್ಥಳೀಯ ಶಾಲೆಯೊಂದರಲ್ಲಿ ಈ ಅಕ್ರಮ ಬೆಳಕಿಗೆ ಬಂದಿದ್ದು, ಟಿಎಂಸಿ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಇವಿಎಂ ಕೆಡಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಆರೋಪಿಸಿದ್ದಾರೆ. ಮತದಾನದ ಹಕ್ಕನ್ನು ಕಸಿದುಕೊಳ್ಳುವ ಇಂತಹ ಪ್ರಯತ್ನಗಳನ್ನು ಸಹಿಸುವುದಿಲ್ಲ ಎಂದು ಹೇಳಿರುವ ಬಿಜೆಪಿ, ಫಾಲ್ಟಾ ಕ್ಷೇತ್ರದ ವಿವಾದಿತ ಬೂತ್‌ಗಳಲ್ಲಿ ತಕ್ಷಣ ಮರು ಮತದಾನ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಈ ಗದ್ದಲದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಭಾರತೀಯ ಚುನಾವಣಾ ಆಯೋಗವು, “ಆರೋಪಗಳು ಗಂಭೀರವಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. ಒಂದು ವೇಳೆ ಇವಿಎಂಗಳಲ್ಲಿ ಟೇಪ್ ಅಂಟಿಸಿರುವುದು ಅಥವಾ ಮತಯಂತ್ರ ತಿರುಚಿರುವುದು ಸಾಬೀತಾದರೆ, ಆಯಾ ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಲಾಗುವುದು,” ಎಂದು ಸ್ಪಷ್ಟಪಡಿಸಿದೆ.

ಪ್ರಸ್ತುತ ಡೈಮಂಡ್ ಹಾರ್ಬರ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಕೇಂದ್ರ ಪಡೆಗಳು ಪರಿಸ್ಥಿತಿಯನ್ನು ಹತೋಟಿಗೆ ತಂದಿವೆ. ಮೇ 4ರಂದು ಫಲಿತಾಂಶ ಪ್ರಕಟವಾಗಲಿದ್ದು, ಈ ವಿವಾದ ಚುನಾವಣಾ ಕಣದಲ್ಲಿ ಸಂಚಲನ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !