ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ನೂರಾರು ಸಮಸ್ಯೆಗಳಿವೆ. ಇದನ್ನು ಹೀಗೆ ಸರಿಪಡಿಸಬೇಕು, ಹಾಗೆ ಸರಿಪಡಿಸಬೇಕು ಎಂದು ನಿತ್ಯವೂ ಜನರು ಅಂದುಕೊಳ್ಳೋದು ಸಾಮಾನ್ಯ. ಆದರೆ ಇದೀಗ ಸರಿಪಡಿಸಲು ಅವಕಾಶವೊಂದನ್ನು ಸರ್ಕಾರ ನೀಡಿದೆ.
ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರು ಜಾತ್ರೆ ನಡೆಯಲಿದೆ. ಇದರ ಅಂಗವಾಗಿ ಸಾರ್ವಜನಿಕ ಸ್ಥಳಗಳನ್ನು ಸುಧಾರಿಸುವ ಉದ್ದೇಶದಿಂದಾಗಿ ಬೆಂಗಳೂರು ವಿನ್ಯಾಸ: ಮುಕ್ತ ಆಹ್ವಾನ ಉಪಕ್ರಮ ಆರಂಭಿಸಲಾಗಿದೆ.
ಏನು ಮಾಡಬಹುದು?
ವಿನ್ಯಾಸಕರು, ವಾಸ್ತುಶಿಲ್ಪಿಗಳು, ಕಲಾವಿದರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಗರದ ದೈನಂದಿನ ಬಳಕೆಯ ಸ್ಥಳಗಳನ್ನು ಅಭಿವೃದ್ಧಿಪಡಿಸಲು ತಮ್ಮ ವಿನ್ಯಾಸ ಮತ್ತು ಸಲಹೆಗಳನ್ನು ಸಲ್ಲಿಸಬಹುದು. ರಸ್ತೆ ದೀಪಗಳು, ಬಸ್ ನಿಲ್ದಾಣಗಳು, ಸಾರ್ವಜನಿಕ ಆಸನಗಳು, ರಸ್ತೆ ವಿಭಜಕಗಳು, ಕಸದ ತೊಟ್ಟಿಗಳು, ನಾಗರಿಕ ಮಾಹಿತಿ ಫಲಕಗಳು, ಅಂಗಡಿಗಳ ಮುಂಭಾಗ ಹಾಗೂ ನೆರೆಹೊರೆ ಪ್ರದೇಶಗಳ ವಿಶಿಷ್ಟ ಗುರುತನ್ನು ಸುಧಾರಿಸುವಂತಹ ಪ್ರಾಯೋಗಿಕ, ಕಡಿಮೆ ವೆಚ್ಚದ ಮತ್ತು ಎಲ್ಲರಿಗೂ ಅನುಕೂಲವಾಗುವ ವಿನ್ಯಾಸಗಳನ್ನು ಆಹ್ವಾನಿಸಲಾಗಿದೆ.
500 ಮೀಟರ್ ಉದ್ದದ ರಸ್ತೆ ಅಥವಾ ಪ್ರದೇಶವನ್ನು ಆಯ್ಕೆ ಮಾಡಿಕೊಂಡು, ಪಾದಚಾರಿ ಸಂಚಾರ, ರಸ್ತೆ ದಾಟುವ ವ್ಯವಸ್ಥೆ, ಹಸಿರು ಪ್ರದೇಶ, ಬೆಳಕಿನ ವ್ಯವಸ್ಥೆ, ಸಾರ್ವಜನಿಕ ಸಾರಿಗೆ ಹಾಗೂ ಅಂಗವಿಕಲರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಒಳಗೊಂಡ ಸಮಗ್ರ ಅಭಿವೃದ್ಧಿ ವಿನ್ಯಾಸವನ್ನೂ ಸಲ್ಲಿಸಬಹುದು.
ಆಯ್ಕೆಯಾದ ವಿನ್ಯಾಸಗಳ ಪ್ರದರ್ಶನ
ಆಯ್ಕೆಯಾದ ವಿನ್ಯಾಸಗಳನ್ನು ಬೆಂಗಳೂರು ಜಾತ್ರೆಯ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ. ಜಿಬಿಎ ರಚಿಸುವ ತೀರ್ಪುಗಾರರ ಸಮಿತಿಯು ಅತ್ಯುತ್ತಮ ಪ್ರಸ್ತಾವನೆಗಳನ್ನು ಆಯ್ಕೆ ಮಾಡಲಿದೆ. ಆಯ್ಕೆಯಾದ ವಿನ್ಯಾಸಗಳನ್ನು ಪರಿಶೀಲನೆಗಾಗಿ ಸಂಬಂಧಪಟ್ಟ ನಗರ ಪಾಲಿಕೆಗಳಿಗೆ ಕಳುಹಿಸಲಾಗುತ್ತದೆ. ಜೊತೆಗೆ, ತಮ್ಮ ವಿನ್ಯಾಸಗಳನ್ನು ಹೇಗೆ ಕಾರ್ಯರೂಪಕ್ಕೆ ತರಬಹುದು ಎಂಬುದರ ಕುರಿತು ಚರ್ಚಿಸಲು ಆಯ್ಕೆಯಾದ ವಿನ್ಯಾಸಕಾರರಿಗೆ ಸಚಿವರನ್ನು ಭೇಟಿಯಾಗುವ ಅವಕಾಶವೂ ನೀಡಲಾಗುತ್ತದೆ.



