ಬೆಂಗಳೂರಿನ ಡಬಲ್ ಮರ್ಡರ್ ಆರೋಪಿ ಮಡಿಕೇರಿಯಲ್ಲಿ ಸೆರೆ

ಹೊಸದಿಗಂತ ವರದಿ ಮಡಿಕೇರಿ:‌

ಬೆಂಗಳೂರಿನಲ್ಲಿ ತನ್ನ ಅಪ್ಪ-ಅಮ್ಮನನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿ ಕೊಡಿಗೆಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೂಲತಃ ಬೆಂಗಳೂರಿನ ಬ್ಯಾಟರಾಯನಪುರದ ಶರತ್ ಬಂಧಿತ ಆರೋಪಿ. ಈತನಿಗೆ 27ವರ್ಷ ವಯಸ್ಸು.

ಘಟನೆಯ ವಿವರ:

ಮಡಿಕೇರಿ-ಮಂಗಳೂರು ರಸ್ತೆಯ ಮದೆನಾಡುವಿನಲ್ಲಿ ಗುರುವಾರ ರಾತ್ರಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರಿಗೆ ವಿಚಾರಣೆ ವೇಳೆ ಯಾವುದೇ ವಿಚಾರ ಸ್ಪಷ್ಟವಾಗಿ ತಿಳಿಸಿಲ್ಲ. ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಭದ್ರತೆಯೊಂದಿಗೆ ಆತನನ್ನು ಜಿಲ್ಲಾಸತ್ರೆಗೆ ದಾಖಲಿಸಿದ್ದಾರೆ.
ಈತನ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕ ಉಮೇಶ್ ಉಪ್ಪಳಿಕೆ ಅವರು ಮಾಹಿತಿ ಕಲೆ ಹಾಕಿದ ಸಂದರ್ಭ ಶರತ್, ತನ್ನ ತಂದೆ-ತಾಯಿಯನ್ನೇ ಕೊಂದ ಕೊಲೆಗಾರ ಎಂಬ ಮಾಹಿತಿ ಲಭ್ಯವಾಗಿದೆ.

ತಕ್ಷಣ ಗ್ರಾಮಾಂತರ ಪೊಲೀಸರು ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು, ಇದೀಗ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಏನಿದು ಪ್ರಕರಣ?

ಮಂಗಳೂರು ಮೂಲದವರಾದ ಭಾಸ್ಕರ್ (64) ಮತ್ತು ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿ ಶಾಂತಾ (60) ಬೆಂಗಳೂರಿನ ಬ್ಯಾಟರಾಯನಪುರದ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದ್ದು, ಅವರ ಪುತ್ರ ಶರತ್, ಕುಡಿತ ಹಾಗೂ ಮಾದಕ ವ್ಯಸನಿಯಾಗಿದ್ದು, ಯಾವುದೇ ಕೆಲಸಕ್ಕೆ ತೆರಳುತ್ತಿರಲಿಲ್ಲ. ಶರತ್ ಮಾನಸಿಕ ಸಮಸ್ಯೆ ಇದ್ದವನಾಗಿದ್ದು, ಪೋಷಕರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.

ಅದೇ ರೀತಿ ಸೋಮವಾರ ಸಂಜೆ ತಂದೆ-ತಾಯಿಯೊಂದಿಗೆ ಜಗಳವಾಡಿದ ಶರತ್, ಕಬ್ಬಿಣದ ರಾಡ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದ. ಭಾಸ್ಕರ್ ಹಾಗೂ ಅವರ ಪತ್ನಿ ಶಾಂತಾ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಹಿರಿಯ ಮಗ ಅಂದು ತಂದೆ-ತಾಯಿಗೆ ಅಂದು ಕರೆ ಮಾಡಿದ್ದು, ಯಾರೂ ಪೋನ್ ಸ್ವೀಕರಿಸದಿದ್ದಾಗ ಆತಂಕಗೊಂಡು ಪಕ್ಕದ ಮನೆಯವರ ಬಳಿ ಪೋಷಕರ ಬಗ್ಗೆ ವಿಚಾರಿಸಿದ್ದಾನೆ. ಅವರು ಬಂದು ನೋಡಿದಾಗ ಜೋಡಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು.

ಜಿಗಣೆ ಕಾಟದಿಂದ ಆರೋಪಿ ಪತ್ತೆ:

ಪೊಲೀಸ್ ಮೂಲಗಳ ಪ್ರಕಾರ, ಪೈಶಾಚಿಕ ಕೃತ್ಯ ಎಸಗಿದ ಪಾಪಿ ಪುತ್ರ ತಲೆಮರೆಸಿಕೊಳ್ಳಲು ಪುತ್ತೂರಿಗೆ ತೆರಳಿ ವಾಪಾಸ್ ಮಡಿಕೇರಿ ಕಡೆ ಬರುತ್ತಿದ್ದ ಎನ್ನಲಾಗಿದೆ. ಬೆಂಗಳೂರು ಪೊಲೀಸರು ಟ್ರ್ಯಾಕ್ ಮಾಡುವ ಸಂದರ್ಭ ಆತ ಪುತ್ತೂರಿಗೆ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಆದರೆ ಮೊಬೈಲ್ ಇಲ್ಲದ ಕಾರಣ ನೆಟ್‌ವರ್ಕ್ ಟ್ರೇಸಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಮಡಿಕೇರಿ ಕಡೆ ಬರುವ ಸಂದರ್ಭ ಮದೆನಾಡು ರಸ್ತೆಯ ಅರಣ್ಯದೊಳಗೆ ತಲೆಮರೆಸಿಕೊಳ್ಳಲು ಆತ ತೆರಳಿದ್ದಾನೆ. ಆದರೆ ಮಳೆ ಹಾಗೂ ಜಿಗಣೆ ಕಾಟಕ್ಕೆ ಕಾಡಿನಿಂದ ಹೊರಬಂದು ರಸ್ತೆ ಬದಿ ಓಡಾಡುತ್ತಿದ್ದ. ಈ ಸಂದರ್ಭ ಸ್ಥಳೀಯರು ಅನುಮಾನದಿಂದ ಪೊಲೀಸರಿಗೆ ಮಾಹಿತಿ ತಿಳಿಸಿದ ಪರಿಣಾಮ ಶರತ್‌ನ ಬಂಧನವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!