ಕಾಂಗ್ರೆಸ್‌ ಸರ್ಕಾರದ ನಡೆ ಖಂಡನೀಯ, ಭಯದ ವಾತಾವರಣ ಸೃಷ್ಟಿ: ಬಿಜೆಪಿಯಿಂದ ಪ್ರತಿಭಟನೆ

ಹೊಸದಿಗಂತ ವರದಿ ಬಳ್ಳಾರಿ:

ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿಯ ನೂರಾರು ಕಾರ್ಯಕರ್ತರು ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.

ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರ ನೇತೃತ್ವದಲ್ಲಿ ನಗರದ ಗಡಗಿ ಚೆನ್ನಪ್ಪ ವೃತ್ತ (ರಾಯಲ್ ಸರ್ಕಲ್) ದಲ್ಲಿ ಜಮಾಯಿಸಿದ ಮುಖಂಡರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಮಾತನಾಡಿ, ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ನವರು ನೀಡಿದ 5 ಗ್ಯಾರಂಟಿಗಳಿಗೆ ಯಾವುದೇ ಷರತ್ತುಗಳಿರಲಿಲ್ಲ, ಅಧಿಕಾರಕ್ಕೆ ಬಂದ ಬಳಿಕ ವಿವಿಧ ಷರತ್ತುಗಳನ್ನು ವಿಧಿಸಿದೆ. ಈ ಹಿಂದೆ 800-900 ಬರುತ್ತಿದ್ದ ವಿದ್ಯುತ್ ಬಿಲ್ ಈಗ 2-3 ಸಾವಿರ ಬರುತ್ತಿದ್ದು, ಜನರು ಹೈರಾಣರಾಗಿದ್ದಾರೆ. ಇಲ್ಲಿವರೆಗೆ ರಾಜ್ಯದಲ್ಲಿ 48 ಜನ ರೈತರು ಸಾಲ ಬಾಧೆಯಿಂದ ಮೃತಪಟ್ಟಿದ್ದು, ರಾಜ್ಯ ಸರ್ಕಾರ ಕನಿಷ್ಠ ಸಾಂತ್ವಾನ ಹೇಳಿಲ್ಲ, ಪರಿಹಾರವನ್ನೂ ವಿತರಿಸಿಲ್ಲ ಎಂದು ಕಾಂಗ್ರೆಸ್‌ ಸರ್ಕಾರವನ್ನು ದೂರಿದ್ದಾರೆ.

ಕಾಂಗ್ರೆಸ್‌ ಸರ್ಕಾರವು ಎಪಿಎಂಸಿ ಕಾಯ್ದೆ, ಗೋ ಹತ್ಯೆ ನಿಷೇಧ, ರೈತರ ವಿದ್ಯಾನಿಧಿ ಸೇರಿದಂತೆ ನಾನಾ ಯೋಜನೆಗಳನ್ನು ಹಿಂಪಡೆದಿದೆ. ಕಿಸಾನ್ ಸಮ್ಮಾನ್ ಯೋಜನೆ ರಾಜ್ಯದ ಪಾಲನ್ನು ಕಡಿತಗೊಳಿಸಿದೆ.
ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳನ್ನು ರದ್ದುಗೊಳಿಸುವ ಮೂಲಕ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು‌ ಅವರು ಕಿಡಿಕಾರಿದರು.

ಉಗ್ರಗಾಮಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಂದೂಕುಗಳು, ಗುಂಡುಗಳು ಸಿಕ್ಕಿದ್ದರೂ ಗೃಹ ಸಚಿವರು ಇನ್ನೂ ಬಂಧಿತರನ್ನು ಉಗ್ರಗಾಮಿಗಳು ಎಂದು ಹೇಳೋಕೆ ಆಗೋಲ್ಲ ಎನ್ನುವುದು ದುರದೃಷ್ಟಕರ. ವಿಶ್ವದಲ್ಲೇ ನಿಷ್ಠಾವಂತರು ಎಂದು ಹೆಸರಾದ ಜೈನ ಮುನಿಗಳನ್ನು ಹತ್ಯೆ ಮಾಡಲಾಗಿದೆ. ಇಲ್ಲಿವರೆಗೂ ಸರ್ಕಾರ ಉನ್ನತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಮುಂದಾಗಿಲ್ಲ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ ಅವರು ಮಾತನಾಡಿ, ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ವರ್ಗಾವಣೆ ದಂಧೆ ಜೋರಾಗಿದೆ, ಪ್ರತಿ ಕ್ಷೇತ್ರದಲ್ಲೂ ಭ್ರಷ್ಟಾಚಾರ ಮಿತಿಮೀರಿದೆ. ಸರ್ಕಾರದ ಜನವಿರೋಧಿ ನಡೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಅನೀಲ್ ನಾಯ್ಡು, ಎಸ್.ಗುರುಲಿಂಗನಗೌಡ, ಎಚ್.ಹನುಮಂತಪ್ಪ, ವಿರುಪಾಕ್ಷಗೌಡ, ಇಬ್ರಾಹಿಂ ಬಾಬು, ಶ್ಯಾಮ್ ಸುಂದರ್, ಡಿ.ಗೋವಿಂದ, ವೇಮಣ್ಣ, ಶ್ರೀನಿವಾಸ್ ಮೋತ್ಕರ್, ಸುಗುಣ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!