ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಯಿಂದ ಬೆಂಗಳೂರಿನ ಹಲವೆಡೆ ಜಲಾವೃತ ಹಾಗೂ ಸಂಚಾರ ಅಸ್ತವ್ಯಸ್ಥ ಉಂಟಾಗಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಹೆಚ್. ಡಿ.ಕುಮಾರಸ್ವಾಮಿ, ಪರಿಸ್ಥಿತಿಯನ್ನು ನಿಬಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಬೆಳೆ ನಷ್ಟ ಹಾಗೂ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ ಜನಪರ ಸರ್ಕಾರ ಅಲ್ಲ ಎಂದಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ,ಕಳೆದ ಮೂರು ದಿನಗಳಿಂದ ನಗರದ ಹಲವೆಡೆ ಮಳೆಯಾಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ರಾಜ್ಯದ ಕೆಲವೆಡೆ ಬೆಳೆ ಕೂಡಾ ನಷ್ಟವಾಗಿದೆ. ಆದರೆ ಈ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡಾ ಮಾತನಾಡಿಲ್ಲ ಎಂದು ಟೀಕಿಸಿದರು.
ಭಾರಿ ಮಳೆಗೆ ಹಲವು ಪ್ರದೇಶಗಳು ಜಲಾವೃತವಾಗಿವೆ. ಆದರೆ ಇದುವರೆಗೂ ಆ ಪ್ರದೇಶಗಳಿಗೆ ಸಚಿವರಾಗಲಿ ಅವರ ಪ್ರತಿನಿಧಿಗಳಾಗಲಿ ಭೇಟಿ ನೀಡಿಲ್ಲ. ಹಲವಾರು ಪ್ರದೇಶಗಳಲ್ಲಿ ಜನರು ಮನೆ ಖಾಲಿ ಮಾಡಿ ಹೋಟೆಲ್‌ಗಳಲ್ಲಿ ತಂಗಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಕಳೆದ ಮೂರು ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ಇದೇ ರೀತಿ ಆಗುತ್ತಿದೆ. ಸರ್ಕಾರ ಇದನ್ನು ಬಹಳ ಲಘುವಾಗಿ ಪರಿಗಣಿಸುತ್ತಿದೆ, ಇದನ್ನು ಎಲ್ಲೆಡೆ ಹರಡಿ ಕರ್ನಾಟಕದ ಹೆಸರು ಹಾಳು ಮಾಡಬೇಡಿ ಎಂದು ಅವರು ಹೇಳುತ್ತಿದ್ದಾರೆ. ಬೆಂಗಳೂರಿನ ಗತಿಯೇನು? ಎಂದು ಪ್ರಶ್ನಿಸಿದರು.
ಒಂದು ಕಾಲದಲ್ಲಿ ಬೆಂಗಳೂರು ಸಿಲಿಕಾನ್ ಸಿಟಿ ಎಂದು ಕರೆಯಲಾಗುತಿತ್ತು. ಇಲ್ಲಿನ ಜನರು ಪ್ರಮುಖ ಜಿಎಸ್ ಟಿ ಪಾವತಿದಾರರು ಮತ್ತು ಇಂದು ಅವರು ಪ್ರತಿದಿನ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.