October 15, 2026
Thursday, October 15, 2026
spot_img

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಸಿಕ್ಕಿತು ಹಸಿರು ನಿಶಾನೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐಟಿ ಸಿಟಿ ಬೆಂಗಳೂರಿನಿಂದ ವಾಣಿಜ್ಯ ನಗರಿ ಮುಂಬೈಗೆ ನೂತನ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ .

ಈ ಸಂಬಂಧ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಅವರು ಕಲ್ಯಾಣ ಕರ್ನಾಟಕ ಸಂಪರ್ಕಕ್ಕೆ ಅನುಕೂಲವಾಗುವಂತೆ ನೂತನ ವಂದೇ ಭಾರತ್ ರೈಲು ಆರಂಭಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಮನವಿ ಸಲ್ಲಿಸಿದ್ದರು. ಇದೀಗ ಸಚಿವರ ಮನವಿಗೆ ಸ್ಪಂದಿಸಿದ ಕೇಂದ್ರ ಸರಕಾರ ಕಲ್ಯಾಣ ಕರ್ನಾಟಕದ ಮಾರ್ಗವಾಗಿ ಬೆಂಗಳೂರು-ಮುಂಬೈ ಮಧ್ಯೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದೆ.

ಈ ಕುರಿತು ಖುಷಿ ಹಂಚಿಕೊಂಡ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು , ಬೆಂಗಳೂರಿನಿಂದ ಮುಂಬೈಗೆ ನೂತನ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಈ ರೈಲು ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕದ ಮಾರ್ಗವಾಗಿ ಸಂಚರಿಸಲು ನನ್ನ ಮನವಿಗೆ ಸ್ಪಂದಿಸಿ, ನೂತನ ವಂದೇ ಭಾರತ್ ಸ್ಲೀಪರ್ ರೈಲು ಕೆ‌ ಎಸ್ ಆರ್ ಬೆಂಗಳೂರು ನಿಲ್ದಾಣದಿಂದ ಕಲ್ಯಾಣ ಕರ್ನಾಟಕದ ಮೂಲಕ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಗೆ ಸಂಚರಿಸಲಿದೆ.

ಈಗಾಗಲೇ ಬೆಂಗಳೂರಿನಿಂದ ಕರ್ನಾಟಕದ ಮಧ್ಯಭಾಗವಾದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ವಾಣಿಜ್ಯ ನಗರಿ ಮುಂಬೈಗೆ ತೆರಳಲು ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಅನುಮೋದನೆ ನೀಡಲಾಗಿತ್ತು. ಈ ಸೂಪರ್ ಫಾಸ್ಟ್ ರೈಲನ್ನು ಶೀಘ್ರವೇ ಪ್ರಾರಂಭಿಸುವುದಾಗಿ, ತದನಂತರದ ದಿನಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲಾಗಿ ಬದಲಾಯಿಸುವಂತೆ ನನ್ನ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ. ಈ ಮೂಲಕ ರಾಜ್ಯದ ಅಭಿವೃದ್ದಿಯ ಜೊತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತಷ್ಟು ಹೆಚ್ಚಿನ ಮಹತ್ವ ಹಾಗೂ ರಾಜ್ಯದಲ್ಲಿನ ವಾಣಿಜ್ಯ ಚಟುವಟಿಕೆಗಳನ್ನು ಹೆಚ್ಚಿಸುವುದರ ಜೊತೆಗೆ ಉತ್ತಮ ಸಂಚಾರ ಸೌಲಭ್ಯವನ್ನು ಈ‌ ನೂತನ ವಂದೇ ಭಾರತ್ ರೈಲು ಬಲವರ್ಧಿಸಲಿದೆ. ಈ ನೂತನ ವಂದೇ ಭಾರತ್ ಸ್ಲೀಪರ್ ರೈಲನ್ನು ಐಟಿ ಸಿಟಿ ಬೆಂಗಳೂರು – ವಾಣಿಜ್ಯ ನಗರಿ ಮುಂಬೈ ಮಧ್ಯೆ ಸಂಚಾರಕ್ಕೆ ಅನುವು ಮಾಡಿಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

Must Read